- Kannada News Photo gallery Cricket photos ICC Women's T20 World Cup 2024 Prize Money Details in kannada
T20 World Cup 2024: ಚಾಂಪಿಯನ್ ನ್ಯೂಜಿಲೆಂಡ್ಗೆ 20 ಕೋಟಿ! ಟೀಂ ಇಂಡಿಯಾಕ್ಕೆ ಸಿಕ್ಕಿದ್ದೆಷ್ಟು?
Women's T20 World Cup 2024 Prize Money: ಚೊಚ್ಚಲ ಟಿ20 ವಿಶ್ವಕಪ್ ಟ್ರೋಫು ಗೆದ್ದ ನ್ಯೂಜಿಲೆಂಡ್ ತಂಡಕ್ಕೆ ಸುಮಾರು 20 ಕೋಟಿ ರೂಪಾಯಿಗಳ ಬಹುಮಾನವನ್ನೂ ನೀಡಲಾಗಿದೆ. ರನ್ನರ್ ಅಪ್ ದಕ್ಷಿಣ ಆಫ್ರಿಕಾ ಕೂಡ 10 ಕೋಟಿ ಪಡೆದಿದ್ದು, ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಟೀಂ ಇಂಡಿಯಾ ಕೂಡ ಒಂದಷ್ಟು ಹಣ ಪಡೆದಿದೆ.
Updated on: Oct 21, 2024 | 3:58 PM

8 ವರ್ಷಗಳ ಬಳಿಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಹೊಸ ತಂಡವೊಂದು ಚಾಂಪಿಯನ್ ಪಟ್ಟಕ್ಕೇರಿದೆ. ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡ ನ್ಯೂಜಿಲೆಂಡ್, ಕಳೆದ ಹಲವಾರು ವರ್ಷಗಳಿಂದ ಆಸ್ಟ್ರೇಲಿಯಾ ಮಹಿಳಾ ತಂಡದ ಪಾರುಪತ್ಯವನ್ನು ಕೊನೆಗೊಳಿಸಿತು. ಅಕ್ಟೋಬರ್ 20 ರಂದು ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 32 ರನ್‌ಗಳಿಂದ ಸೋಲಿಸಿತು.

ಇದರೊಂದಿಗೆ ತನ್ನ ಮೂರನೇ ಫೈನಲ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಚೊಚ್ಚಲ ಟಿ20 ವಿಶ್ವಕಪ್ ಟ್ರೋಫು ಗೆದ್ದ ನ್ಯೂಜಿಲೆಂಡ್ ಮೇಲೆ ಐಸಿಸಿ ಸಾಕಷ್ಟು ಹಣದ ಹೊಳೆ ಹರಿಸಿದೆ. ಅದರಂತೆ ಕಿವೀಸ್ ಪಡೆಗೆ ಸುಮಾರು 20 ಕೋಟಿ ರೂಪಾಯಿಗಳ ಬಹುಮಾನವನ್ನೂ ನೀಡಲಾಗಿದೆ. ರನ್ನರ್ ಅಪ್ ದಕ್ಷಿಣ ಆಫ್ರಿಕಾ ಕೂಡ 10 ಕೋಟಿ ಪಡೆದಿದ್ದು, ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಟೀಂ ಇಂಡಿಯಾ ಕೂಡ ಒಂದಷ್ಟು ಹಣ ಪಡೆದಿದೆ.

ಅಕ್ಟೋಬರ್ 3 ರಂದು ಯುಎಇಯಲ್ಲಿ ಪ್ರಾರಂಭವಾದ ಪಂದ್ಯಾವಳಿಯು ಅಕ್ಟೋಬರ್ 20 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನೊಂದಿಗೆ ಮುಕ್ತಾಯಗೊಂಡಿತು. ಈ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 158 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ ಕೇವಲ 126 ರನ್ ಗಳಿಸಲು ಸಾಧ್ಯವಾಯಿತು.

ಈ ಮೂಲಕ ಚಾಂಪಿಯನ್ ನ್ಯೂಜಿಲೆಂಡ್ ತಂಡಕ್ಕೆ 2.34 ಮಿಲಿಯನ್ ಡಾಲರ್ ಅಂದರೆ ಸುಮಾರು 19.67 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ಇದು ಮಹಿಳಾ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಯಾವುದೇ ಚಾಂಪಿಯನ್ ತಂಡ ಪಡೆದ ದೊಡ್ಡ ಬಹುಮಾನ ಮೊತ್ತವಾಗಿದೆ. ಇದಲ್ಲದೆ, ಗುಂಪು ಹಂತದ ಒಂದು ಪಂದ್ಯವನ್ನು ಗೆದ್ದ ಪ್ರತಿ ತಂಡಕ್ಕೆ 26.19 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ನ್ಯೂಜಿಲೆಂಡ್ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದಿದ್ದರಿಂದ ಹೆಚ್ಚುವರಿಯಾಗಿ 78 ಲಕ್ಷ ರೂ. ಹಣ ಸಿಕ್ಕಿದೆ. ಈ ಮೂಲಕ ನ್ಯೂಜಿಲೆಂಡ್ ಸುಮಾರು 20.45 ಕೋಟಿ ಬಹುಮಾನ ಪಡೆಯಲಿದೆ.

ರನ್ನರ್ ಅಪ್ ಆಗಿರುವ ದಕ್ಷಿಣ ಆಫ್ರಿಕಾ ತಂಡ 1.17 ಮಿಲಿಯನ್ ಡಾಲರ್ ಅಂದರೆ 9.83 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ದಕ್ಷಿಣ ಆಫ್ರಿಕಾ ಕೂಡ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಇದರಿಂದ ಹೆಚ್ಚುವರಿಯಾಗಿ 78 ಲಕ್ಷ ರೂ. ಹಣ ಸಿಕ್ಕಿದೆ. ಅಂದರೆ ದಕ್ಷಿಣ ಆಫ್ರಿಕಾ ತಂಡ ಒಟ್ಟು ಸುಮಾರು 10.62 ಕೋಟಿ ರೂ. ಬಹುಮಾನ ಪಡೆಯಲಿದೆ.

ಟೀಂ ಇಂಡಿಯಾದ ಮಟ್ಟಿಗೆ ಹೇಳುವುದಾದರೆ, ಟೂರ್ನಿಯಲ್ಲಿ ತೋರಿದ ನಿರಾಶಾದಾಯಕ ಪ್ರದರ್ಶನವು ತಂಡ ಪಡೆದ ಬಹುಮಾನದ ಮೊತ್ತದ ಮೇಲೂ ಪರಿಣಾಮ ಬೀರಿದೆ. ಭಾರತ ತಂಡ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು. ಆದರೆ, ಟೀಂ ಇಂಡಿಯಾ ತನ್ನ ಗುಂಪಿನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಸೋಲಿಸಿತ್ತು. ಈ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಕೇವಲ 52 ಲಕ್ಷ ರೂ.ಗಳನ್ನು ಬಹುಮಾನವನ್ನಾಗಿ ಪಡೆದುಕೊಂಡಿದೆ.



















