
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ.

4 ವರ್ಷಗಳ ನಂತರ ಚಿನ್ನಸ್ವಾಮಿಯಲ್ಲಿ ಟಿ20 ಪಂದ್ಯ ಆಡುತ್ತಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಎಲ್ಲರನ್ನೂ ನಿರಾಸೆಗೊಳಿಸಿದ್ದಾರೆ. ಈ ಮೂಲಕ ವಿರಾಟ್ ಅವರ ವೃತ್ತಿಜೀವನದಲ್ಲಿ ಹಿಂದೆಂದೂ ನಡೆಯದಂತಹ ಘಟನೆ ಈ ಪಂದ್ಯದಲ್ಲಿ ಸಂಭವಿಸಿದೆ.

ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಔಟಾದರು. ಇದು ಟಿ20 ವೃತ್ತಿಜೀವನದಲ್ಲಿ ಕೊಹ್ಲಿ ಅವರ 5ನೇ ಶೂನ್ಯ ಸಂಪಾದನೆಯಾಗಿದೆ. ಆದರೆ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಗೋಲ್ಡನ್ ಡಕ್‌ನಲ್ಲಿ ಔಟಾಗಿರುವುದು ಇದೇ ಮೊದಲು.

ಅಂದರೆ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮೊದಲ ಎಸೆತದಲ್ಲಿಯೇ ಔಟಾಗಿದ್ದಾರೆ.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಕೊಹ್ಲಿಗೆ ಇದುವರೆಗೆ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಒಟ್ಟು 6 ಟಿ20 ಪಂದ್ಯಗಳನ್ನು ಆಡಿದ್ದು, 23.20ರ ಸರಾಸರಿಯಲ್ಲಿ ಕೇವಲ 116 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಒಮ್ಮೆಯೂ ವಿರಾಟ್ ಅರ್ಧಶತಕದ ಗಡಿ ದಾಟಿಲ್ಲ.

ಕೊಹ್ಲಿಯಂತೆಯೇ ಸಂಜು ಸ್ಯಾಮ್ಸನ್ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಸಿಕ್ಕಿದ ಅವಕಾಶವನ್ನು ಕೈಚೆಲ್ಲಿದ್ದಾರೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಆಡುವ 11 ರಲ್ಲಿ ಅವಕಾಶ ಪಡೆದಿದ್ದ ಸಂಜು ಗೋಲ್ಡನ್ ಡಕ್ ಆಗಿದ್ದಾರೆ.

ಈ ಇಬ್ಬರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಆರಂಭಿಕ ಯಶಸ್ವಿ ಜೈಸ್ವಾಲ್ 6 ಎಸೆತಗಳಲ್ಲಿ 4 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಕಳೆದೆರಡು ಪಂದ್ಯಗಳ ಹೀರೋ ಶಿವಂ ದುಬೆ ಕೇವಲ 1 ರನ್‌ಗಳಿಗೆ ಸುಸ್ತಾದರು