Updated on: Mar 18, 2023 | 10:41 AM
ಟೆಸ್ಟ್ ಸರಣಿ ಬಳಿಕ ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ (India vs Australia) ಭರ್ಜರಿ ಆರಂಭ ಪಡೆದುಕೊಂಡಿದೆ.
ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೆಎಲ್ ರಾಹುಲ್ (KL Rahul) ಅವರ ಅಜೇಯ 75 ರನ್ ಮತ್ತು ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದಿಂದ ಭಾರತ 39.5 ಓವರ್ನಲ್ಲೇ 189 ರನ್ಗಳ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿತು.
ಈ ಪಂದ್ಯದಲ್ಲಿ ಟಾಸ್ ಸೊತ ಆಸ್ಟ್ರೇಲಿಯಾ ಬ್ಯಾಟಿಂಗ್ಗೆ ಇಳಿಯಿತು. ಆದರೆ, ಮಿಚೆಲ್ ಮಾರ್ಶ್ ಬಿಟ್ಟರೆ ಉಳಿದ ಎಲ್ಲ ಬ್ಯಾಟರ್ಗಳು ಭಾರತೀಯ ಬೌಲಿಂಗ್ ದಾಳಿಗೆ ಪೆವಿಲಿಯನ್ ಸೇರಿಕೊಂಡರು. ಮಾರ್ಶ್ 65 ಎಸೆತಗಳಲ್ಲಿ 10 ಫೋರ್, 5 ಸಿಕ್ಸರ್ನೊಂದಿಗೆ 81 ರನ್ ಕಲೆಹಾಕಿದರು.
ಆಸ್ಟ್ರೇಲಿಯಾ 35.4 ಓವರ್ನಲ್ಲಿ 188 ರನ್ಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ ಜಡೇಜಾ 2 ವಿಕೆಟ್ ಕಿತ್ತರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಕಳಪೆ ಆರಂಭ ಪಡೆದುಕೊಂಡಿತು. ಇಶಾನ್ ಕಿಶನ್ 3 ರನ್ , ಶುಭ್ಮನ್ ಗಿಲ್ 20, ವಿರಾಟ್ ಕೊಹ್ಲಿ 4 ಹಾಗೂ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು. ಹಾರ್ದಿಕ್ 25 ರನ್ಗಳ ಕಾಣಿಕೆ ನೀಡಿದರು.
ನಂತರ 6ನೇ ವಿಕೆಟ್ಗೆ ಜೊತೆಯಾದ ಕೆಎಲ್ ರಾಹುಲ್ (ಅಜೇಯ 75) ಹಾಗೂ ರವೀಂದ್ರ ಜಡೇಜಾ (ಅಜೇಯ 45) ಬೊಂಬಾಟ್ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ 39.5 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿ ಜಯ ಸಾಧಿಸುವಂತೆ ಮಾಡಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತು ಮಿಂಚಿದರೆ, ಮಾರ್ಕಸ್ ಸ್ಟೋಯಿನಿಸ್ 2 ವಿಕೆಟ್ ಪಡೆದರು.