ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸತತ ಸೋಲುಗಳಿಂದ ಹೊರಬಂದಿರುವ ಆಸ್ಟ್ರೇಲಿಯಾ ತಂಡ ಇಂದೋರ್ ಟೆಸ್ಟ್ ಗೆದ್ದು ಸರಣಿಯನ್ನು ಜೀವಂತವಾಗಿರಿಸಿದೆ. ಅಲ್ಲದೆ ಕೊನೆಯ ಪಂದ್ಯ ಗೆದ್ದು ಸರಣಿಯನ್ನು ಡ್ರಾದೊಂದಿಗೆ ಅಂತ್ಯಗೊಳಿಸಲು ಶ್ರಮಿಸುತ್ತಿದೆ.
ಆದರೆ ಈ ನಡುವೆ ಆಸೀಸ್ ಪಾಳಯಕ್ಕೆ ಆಘಾತ ಎದುರಾಗಿದ್ದು, ತಂಡದ ನಾಯಕ ಪ್ಯಾಟ್ ಕಮಿನ್ಸ್ ನಾಲ್ಕನೇ ಟೆಸ್ಟ್ನಿಂದಲೂ ಹೊರಗುಳಿಯಲು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ಗೆ ನಾಯಕತ್ವ ಪಟ್ಟಕಟ್ಟಲಾಗಿದೆ.
ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಎರಡು ಪಂದ್ಯಗಳ ನಂತರ ಕಮಿನ್ಸ್ ತಮ್ಮ ತಾಯಿತ ಅನಾರೋಗ್ಯದ ಕಾರಣ ಮನೆಗೆ ಮರಳಿದ್ದರು. ಕಮಿನ್ಸ್ ಅವರ ತಾಯಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಸದ್ಯ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಕಮಿನ್ಸ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದು, ‘ ಆಸೀಸ್ ಖಾಯಂ ನಾಯಕ ಕಮಿನ್ಸ್ ನಾಲ್ಕನೇ ಟೆಸ್ಟ್ನಿಂದಲೂ ಹೊರಗುಳಿಯಲಿದ್ದಾರೆ ಎಂದಿದೆ. ಕಮಿನ್ಸ್ ನಾಯಕತ್ವದಲ್ಲಿ ಆಸೀಸ್ ತಂಡ ಅಹಮದಾಬಾದ್ ಮತ್ತು ದೆಹಲಿಯಲ್ಲಿ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತಿತ್ತು.
ಟೆಸ್ಟ್ ಸರಣಿಯ ಬಳಿಕ ನಡೆಯಲ್ಲಿರುವ ಏಕದಿನ ಸರಣಿಗೆ ಕಮಿನ್ಸ್ ಲಭ್ಯರಿರುತ್ತಾರಾ ಎಂಬ ಪ್ರಶ್ನೆಗೂ ಯಾವುದೇ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಕಮಿನ್ಸ್ ಅವರನ್ನು ಏಕದಿನ ತಂಡದ ನಾಯಕನಾಗಿ ನೇಮಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.
Published On - 2:08 pm, Mon, 6 March 23