- Kannada News Photo gallery Cricket photos IND vs AUS: Jasprit Bumrah may be fined as he questions umpire Decision
IND vs AUS: ಅಂಪೈರ್ ವಿರುದ್ಧ ತಿರುಗಿ ನಿಂತ ಜಸ್ಪ್ರೀತ್ ಬುಮ್ರಾಗೆ ದಂಡದ ಭೀತಿ
India vs Australia: ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಗಾಯದ ಸಮಸ್ಯೆಗೆ ಒಳಗಾಗಿರುವ ಜಸ್ಪ್ರೀತ್ ಬುಮ್ರಾ ದ್ವಿತೀಯ ದಿನದಾಟದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದಾರೆ. ಆದರೆ ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಬುಮ್ರಾ ಮೂರನೇ ಅಂಪೈರ್ ತೀರ್ಪನ್ನು ಪ್ರಶ್ನಿಸಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
Updated on: Jan 04, 2025 | 11:30 AM

ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿರುವ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಐಸಿಸಿಯ ದಂಡದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಔಟ್ ತೀರ್ಪನ್ನು ಬುಮ್ರಾ ಪಶ್ನಿಸಿದ್ದರು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಪಾಲಿಗೆ ಸುಂದರ್ ಅವರ ಅಗತ್ಯವಿತ್ತು. ಆದರೆ ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಅವರು ಬಲಿಯಾದರು.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಭರ್ಜರಿ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್ ಬದಿಯಿಂದ ಸಾಗಿ ವಿಕೆಟ್ ಕೀಪರ್ ಕೈ ಸೇರಿತು. ಅತ್ತ ಆಸ್ಟ್ರೇಲಿಯಾ ಆಟಗಾರರ ಕ್ಯಾಚ್ಗೆ ಮನವಿ ಮಾಡಿದರೂ ಆನ್ ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ಇದರ ಬೆನ್ನಲ್ಲೇ ಕಮಿನ್ಸ್ ಡಿಆರ್ಎಸ್ ತೆಗೆದುಕೊಂಡರು.

ಟಿವಿ ಅಂಪೈರ್ ವಿಡಿಯೋ ಪರಿಶೀಲಿಸಿದಾಗ ಸ್ನಿಕೋ ಮೀಟರ್‌ನಲ್ಲಿ ಚಲನೆ ಗೋಚರಿಸಿತು. ಆದರೆ ಫ್ರೇಮ್ ಬದಲಾದ ತಕ್ಷಣ ಚಲನೆಯು ಕಣ್ಮರೆಯಾಯಿತು. ಇದಾಗ್ಯೂ ಮೂರನೇ ಅಂಪೈರ್ ವಾಷಿಂಗ್ಟನ್ ಸುಂದರ್ ಅವರನ್ನು ಔಟ್ ಎಂದು ತೀರ್ಪು ನೀಡಿ ಅಚ್ಚರಿ ಮೂಡಿಸಿದರು. ಇದರ ಬೆನ್ನಲ್ಲೇ ನಾನ್ ಸ್ಟ್ರೈಕ್ನಲ್ಲಿದ್ದ ಬುಮ್ರಾ ಅಂಪೈರ್ ತೀರ್ಪನ್ನು ಪ್ರಶ್ನಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಸ್ನಿಕೋ ಮೀಟರ್ ಪರಿಶೀಲಿಸಿ ಮೂರನೇ ಅಂಪೈರ್ ಔಟ್ ನೀಡಿರಲಿಲ್ಲ. ಆದರೆ ಈಗ ಹೇಗೆ ಔಟ್ ನೀಡಿದ್ದಾರೆ ಎಂದು ಜಸ್ಪ್ರೀತ್ ಬುಮ್ರಾ ಪ್ರಶ್ನಿಸಿದ್ದಾರೆ. ಅಂಪೈರ್ ತೀರ್ಪನ್ನು ಪ್ರಶ್ನಿಸಿರುವ ಬುಮ್ರಾ ಅವರ ವಿಡಿಯೋ ಇದೀಗ ವೈರಲ್ ಆಗಿದ್ದು, ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.

ಐಸಿಸಿ ನಿಯಮಗಳ ಪ್ರಕಾರ, ಅಂಪೈರ್‌ಗಳ ತೀರ್ಮಾನವೇ ಅಂತಿಮ. ಇದನ್ನು ಆಟಗಾರರು ಪ್ರಶ್ನಿಸುವಂತಿಲ್ಲ. ಅಂಪೈರ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದು ಕಂಡು ಬಂದರೆ, ಹಂತ 1, ಹಂತ 2, ಹಂತ 3 ಮತ್ತು ಹಂತ 4 ನಿಯಮಗಳ ಮೂಲಕ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ. ಇದೀಗ ಜಸ್ಪ್ರೀತ್ ಬುಮ್ರಾ ಅವರ ನಡೆಯು ಹಂತ 1 ಅಪರಾಧದ ಅಡಿಯಲ್ಲಿ ಬರುತ್ತವೆ. ಹೀಗಾಗಿ ಐಸಿಸಿ ಬುಮ್ರಾ ವಿರುದ್ಧ ಕ್ರಮ ಕೈಗೊಂಡರೂ ಅಚ್ಚರಿಪಡಬೇಕಿಲ್ಲ.




