IND vs AUS: ಟೀಮ್ ಇಂಡಿಯಾ ಆರಂಭಿಕ ಜೋಡಿ ಯಾರು?
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಪರ್ತ್ನಲ್ಲಿ ಜರುಗಲಿರುವ ಈ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.
1 / 7
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಪರ್ತ್ ಟೆಸ್ಟ್ನಿಂದ ಹೊರಗುಳಿಯುತ್ತಿರುವುದಾಗಿ ಹಿಟ್ಮ್ಯಾನ್ ಬಿಸಿಸಿಐಗೆ ತಿಳಿಸಿದ್ದಾರೆ. ಇದರೊಂದಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿ ಬದಲಾಗುವುದು ಕೂಡ ಖಚಿತವಾಗಿದೆ.
2 / 7
ಇದಾಗ್ಯೂ ಒಂದು ಕಡೆ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವುದು ಖಚಿತ. ಕಳೆದ ಒಂದು ವರ್ಷದಿಂದ ಭಾರತ ತಂಡದ ಖಾಯಂ ಓಪನರ್ ಆಗಿರುವ ಜೈಸ್ವಾಲ್ ಭರ್ಜರಿ ಪ್ರದರ್ಶನದೊಂದಿಗೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
3 / 7
ಆದರೆ ಮತ್ತೊಂದು ತುದಿಯಲ್ಲಿ ಕಣಕ್ಕಿಳಿಯುವವರು ಯಾರು ಎಂಬುದೇ ಪ್ರಶ್ನೆ. ಏಕೆಂದರೆ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಶುಭ್ಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆಯಿತ್ತು. ಆದರೀಗ ಹೆಬ್ಬೆರಳಿನ ಗಾಯದ ಕಾರಣ ಗಿಲ್ ಕೂಡ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಹೊಸ ಆರಂಭಿಕನ ಮೊರೆ ಹೋಗಬೇಕಾಗುತ್ತದೆ.
4 / 7
ಇಲ್ಲಿ ಅನುಭವಿ ಆಟಗಾರನಾಗಿ ಕೆಎಲ್ ರಾಹುಲ್ ಇದ್ದಾರೆ. ವಿದೇಶದಲ್ಲಿ ರಾಹುಲ್ 51 ಇನಿಂಗ್ಸ್ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದು, ಈ ವೇಳೆ ಒಟ್ಟು 1682 ರನ್ ಕಲೆಹಾಕಿದ್ದಾರೆ. ಅಲ್ಲದೆ ಆರಂಭಿಕನಾಗಿ 6 ಶತಕ ಹಾಗೂ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ಬದಲಿಗೆ ಟೀಮ್ ಇಂಡಿಯಾದ ಮೊದಲ ಆಯ್ಕೆ ಕೆಎಲ್ ರಾಹುಲ್ ಎನ್ನಬಹುದು.
5 / 7
ಆದರೆ ಕೆಎಲ್ ರಾಹುಲ್ ಅವರನ್ನು ಮೊದಲು ಕಣಕ್ಕಿಳಿಸಿದರೆ, ಮದ್ಯಮ ಕ್ರಮಾಂಕವು ದುರ್ಬಲವಾಗಬಹುದು. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್ನ ಕೊರತೆ ಇದೆ. ಇಲ್ಲಿ ಸರ್ಫರಾಝ್ ಖಾನ್, ಧ್ರುವ್ ಜುರೆಲ್ ಇದ್ದರೂ, ಇಬ್ಬರಿಗೂ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರ ಕ್ರಮಾಂಕ ಬದಲಾವಣೆಗೆ ಟೀಮ್ ಇಂಡಿಯಾ ಮುಂದಾಗಲಿದೆಯಾ ಎಂಬುದೇ ಪ್ರಶ್ನೆ.
6 / 7
ಒಂದು ವೇಳೆ ಕೆಎಲ್ ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಮುಂದುವರೆಸಿದರೆ, ಟೀಮ್ ಇಂಡಿಯಾ ಪರ ಅಭಿಮನ್ಯು ಈಶ್ವರನ್ ಇನಿಂಗ್ಸ್ ಆರಂಭಿಸಲಿದ್ದಾರೆ. 101 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು 27 ಶತಕ ಹಾಗೂ 29 ಅರ್ಧಶತಕಗಳೊಂದಿಗೆ ಒಟ್ಟು 7674 ರನ್ ಕಲೆಹಾಕಿದ್ದಾರೆ. ಹೀಗಾಗಿ ಯಶಸ್ವಿ ಜೈಸ್ವಾಲ್ ಜೊತೆ ಅಭಿಮನ್ಯು ಈಶ್ವರನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.
7 / 7
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.