IND vs AUS: ವಿರಾಟ್ ಕೊಹ್ಲಿಗೆ ದಂಡ ವಿಧಿಸಿ, ಡಿಮೆರಿಟ್ ಪಾಯಿಂಟ್ ನೀಡಿದ ಐಸಿಸಿ
Australia vs India, 4th Test: ಮೆಲ್ಬೋರ್ನ್ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದ 10ನೇ ಓವರ್ ಮುಕ್ತಾಯದ ವೇಳೆ ಭುಜದಿಂದ ಗುದ್ದುವ ಮೂಲಕ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ನನ್ನು ಕೆಣಕಿದ್ದರು. ಇದೀಗ ಈ ವರ್ತನೆಗಾಗಿ ಕೊಹ್ಲಿಗೆ ದಂಡ ವಿಧಿಸಲಾಗಿದೆ.
1 / 5
ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆಕ್ರಮಣಕಾರಿ ವರ್ತನೆ ತೋರಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರಾಟ್ ಕೊಹ್ಲಿಗೆ ದಂಡ ವಿಧಿಸಿದೆ. ಈ ದಂಡದೊಂದಿಗೆ ಒಂದು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
2 / 5
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಸ್ಯಾಮ್ ಕೊನ್ಸ್ಟಾಸ್ ಅವರನ್ನು ವಿರಾಟ್ ಕೊಹ್ಲಿ ಭುಜದಿಂದ ಗುದ್ದಿ ಕೆಣಕಿದ್ದರು. ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಾಗಿ ನಡೆದಿದ್ದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮ್ಯಾಚ್ ರೆಫರಿ ಕೊಹ್ಲಿಯನ್ನು ವಿಚಾರಣೆಗೆ ಕರೆದಿದ್ದಾರೆ. ಈ ವೇಳೆ ಕೊಹ್ಲಿ ತಮ್ಮ ತಪ್ಪು ಒಪ್ಪಿಕೊಂಡಿದ್ದು, ಹೀಗಾಗಿ ದಂಡದ ಶಿಕ್ಷೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
3 / 5
ಅದರಂತೆ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಲಾಗಿದ್ದು, ಇದರ ಜೊತೆಗೆ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಹೀಗಾಗಿ ಮುಂಬರುವ ಇನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಶಿಸ್ತಿನಿಂದ ಆಡಬೇಕಾಗುತ್ತದೆ.
4 / 5
ಏಕೆಂದರೆ ಐಸಿಸಿ ನಿಯಮಗಳ ಪ್ರಕಾರ, 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಪಾಯಿಂಟ್ಸ್ ಪಡೆದರೆ, ಆ ಆಟಗಾರನನ್ನು ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಹೀಗಾಗಿ ಮತ್ತೆ ಡಿಮೆರಿಟ್ ಪಾಯಿಂಟ್ಸ್ಗೆ ಒಳಗಾಗದಂತೆ ಕೊಹ್ಲಿ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ.
5 / 5
ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಅವರಿಗೂ ಐಸಿಸಿ ಒಂದು ಡಿಮೆರಿಟ್ ಪಾಯಿಂಟ್ಸ್ ನೀಡಿತ್ತು. ಅಡಿಲೇಡ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಸಿರಾಜ್ಗೆ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿ, ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಹೀಗಾಗಿಯೇ ಮೊಹಮ್ಮದ್ ಸಿರಾಜ್ ಬ್ರಿಸ್ಬೇನ್ ಹಾಗೂ ಮೆಲ್ಬೋರ್ನ್ ಟೆಸ್ಟ್ ಪಂದ್ಯಗಳಲ್ಲಿ ಆಕ್ರಮಣಕಾರಿ ವರ್ತನೆಯಿಂದ ದೂರ ಉಳಿದಿದ್ದಾರೆ.