- Kannada News Photo gallery Cricket photos IND vs AUS: Virat Kohli Get Penalised For Sam Konstas Shoulder Clash
Virat Kohli: ಕಿರಿಕ್ ಕೊಹ್ಲಿಗೆ ಬಿಸಿ ಮುಟ್ಟಿಸಲು ಮುಂದಾದ ಐಸಿಸಿ
Australia vs India, 4th Test: ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದ ಮೊದಲ ದಿನದಾಟದ ಟೀ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ತಂಡವು 2 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿದೆ. ಆಸ್ಟ್ರೇಲಿಯಾ ಪರ ಸ್ಯಾಮ್ ಕೊನ್ಸ್ಟಾಸ್ (60) ಹಾಗೂ ಉಸ್ಮಾನ್ ಖ್ವಾಜಾ (57) ಅರ್ಧಶತಕ ಬಾರಿಸಿ ಔಟಾಗಿದ್ದಾರೆ.
Updated on: Dec 26, 2024 | 10:09 AM

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವೇ ರಣರೋಚಕ ಕಾದಾಟಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಈ ಪಂದ್ಯದ ವೇಳೆ ಕೊಹ್ಲಿ ಆಕ್ರಮಣಕಾರಿ ವರ್ತನೆಯಿಂದ ಗಮನ ಸೆಳೆದಿದ್ದಾರೆ. ಈ ನಡೆಯನ್ನು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸಲಿದೆ ಎಂದು ವರದಿಯಾಗಿದೆ.

ಈ ಪಂದ್ಯದ 10ನೇ ಓವರ್ ಮುಕ್ತಾಯದ ವೇಳೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ ಸ್ಯಾಮ್ ಕೊನ್ಸ್ಟಾಸ್ ಅವರನ್ನು ಭುಜಕ್ಕೆ ಭುಜ ನೀಡಿ ಕೆಣಕಿದ್ದರು. ಮೇಲ್ನೋಟಕ್ಕೆ ಕೊಹ್ಲಿ ಉದ್ದೇಶ ಪೂರ್ವಕವಾಗಿಯೇ ಆಸೀಸ್ ಆಟಗಾರನೊಂದಿಗೆ ಜಗಳಕ್ಕಿಳಿದಿರುವುದು ಸ್ಪಷ್ಟವಾಗಿದೆ.

ಈ ಜಗಳ ತಾರಕ್ಕೇರುತ್ತಿದ್ದಂತೆ ಅಂಪೈರ್ ಮತ್ತು ಸಹ ಆಟಗಾರರು ಮಧ್ಯ ಪ್ರವೇಶಿಸಿದ್ದರು. ಇದೀಗ ಈ ಭುಜಬಲದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಈ ಘಟನೆಯನ್ನು ಪರಿಶೀಲಿಸಲು ಐಸಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿದೆ.

ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಬಳಿಕ ಅಥವಾ ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ಸ್ಟಾಸ್ ಅವರನ್ನು ಮ್ಯಾಚ್ ರೆಫರಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಅಲ್ಲದೆ ಇಲ್ಲಿ ಕೊಹ್ಲಿ ತಪ್ಪು ಮಾಡಿರುವುದು ಸಾಬೀತಾದರೆ ಡಿಮೆರಿಟ್ ಪಾಯಿಂಟ್ನೊಂದಿಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ.

ಏಕೆಂದರೆ ಇದಕ್ಕೂ ಮುನ್ನ ಅಡಿಲೇಡ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ಜೊತೆ ಕಿರಿಕ್ ಮಾಡಿಕೊಂಡಿದ್ದ ಮೊಹಮ್ಮದ್ ಸಿರಾಜ್ಗೆ ಐಸಿಸಿ ಡಿಮೆರಿಟ್ ಪಾಯಿಂಟ್ ನೀಡಿ, ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿದ್ದರು. ಇದೀಗ ಮೆಲ್ಬೋರ್ನ್ನಲ್ಲಿ ವಿರಾಟ್ ಕೊಹ್ಲಿ ಮಾತಿನ ಚಕಮಕಿ ನಡೆಸಿರುವ ಕಾರಣ ಇದೇ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಯಿದೆ.
