- Kannada News Photo gallery Cricket photos From Faf du Plessis to sam konstas including 3 players most runs in jasprit bumrah one spell
ಟೆಸ್ಟ್ನಲ್ಲಿ ಬುಮ್ರಾ ವಿರುದ್ಧ ಅಬ್ಬರಿಸಿದ್ದು ಮೂವರು ಮಾತ್ರ, ಅವರೆಂದರೆ…
Jasprit Bumrah: ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್‌ನಲ್ಲಿ ನಿರ್ವಿವಾದವಾಗಿ ಪ್ರಾಬಲ್ಯ ಹೊಂದಿದ್ದಾರೆ. ಈ ಅಪಾಯಕಾರಿ ಬೌಲರ್‌ನನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಮೂರು ಸ್ವರೂಪಗಳಲ್ಲೂ ಕರಾರುವಾಕ್ ದಾಳಿ ಸಂಘಟಿಸುತ್ತಾ ಬಂದಿರುವ ಬುಮ್ರಾ ವಿರುದ್ಧ ಯುವ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಅಬ್ಬರಿಸಿರುವುದು ವಿಶೇಷ.
Updated on: Dec 26, 2024 | 2:09 PM

ಜಸ್ಪ್ರೀತ್ ಬುಮ್ರಾ... ಪ್ರಸ್ತುತ ಟೆಸ್ಟ್ ಕ್ರಿಕೆಟ್ನ ನಂಬರ್ 1 ಬೌಲರ್. ಈ ನಂಬರ್ ಒನ್ ಪಟ್ಟದ ಹೊರತಾಗಿಯೂ ಆಸ್ಟ್ರೇಲಿಯಾದ ಯುವ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಬುಮ್ರಾ ಓವರ್ಗಳಲ್ಲಿ ಅಬ್ಬರಿಸಿದ್ದಾರೆ. ಈ ಸಿಡಿಲಬ್ಬರದೊಂದಿಗೆ ಬುಮ್ರಾ ಅವರ ಟೆಸ್ಟ್ ಸ್ಪೆಲ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರ ಎಸೆತಗಳನ್ನು ಗುರುತಿಸಿಕೊಳ್ಳುವುದು ಯಾವುದೇ ಬ್ಯಾಟ್ಸ್‌ಮನ್‌ಗೆ ಸುಲಭವಲ್ಲ. ಆದಾಗ್ಯೂ, ಈ ಬೌಲರ್ ವಿರುದ್ಧ ಕೆಲ ಬ್ಯಾಟರ್ಗಳು ಮಾತ್ರ ಮಿಂಚಿದ್ದಾರೆ. ಹೀಗೆ ಬುಮ್ರಾ ಅವರನ್ನು ಲೀಲಾಜಾಲವಾಗಿ ಎದುರಿಸಿದ ವಿಶ್ವದ ಮೂವರು ಬ್ಯಾಟರ್ಗಳನ್ನು ನೋಡುವುದಾದರೆ...

ಸ್ಯಾಮ್ ಕೊನ್ಸ್ಟಾಸ್ (2024): ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿರುವ ಸ್ಯಾಮ್ ಕೊನ್ಸ್ಟಾಸ್ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿರುದ್ಧ ಅಕ್ಷರಶಃ ಅಬ್ಬರಿಸಿದ್ದರು. ಈ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಬುಮ್ರಾ ಎಸೆದ ಮೊದಲ ಸ್ಪೆಲ್ನಲ್ಲಿ 34 ಎಸೆತಗಳನ್ನು ಎದುರಿಸಿದ ಸ್ಯಾಮ್ ಬರೋಬ್ಬರಿ 33 ರನ್ ಚಚ್ಚಿದರು. ಅದರಲ್ಲೂ ಒಂದು ಓವರ್ನಲ್ಲಿ 14 ರನ್ ಬಾರಿಸಿದ್ದ ಸ್ಯಾಮ್ ಮತ್ತೊಂದು ಓವರ್ನಲ್ಲಿ 18 ರನ್ ಸಿಡಿಸಿದ್ದು ವಿಶೇಷ.

ಅಲಸ್ಟೇರ್ ಕುಕ್ (2018): ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಕೂಡ ಬುಮ್ರಾ ಓವರ್ಗಳಲ್ಲಿ ಅಬ್ಬರಿಸಿದ ಇತಿಹಾಸ ಹೊಂದಿದ್ದಾರೆ. 2018 ರಲ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಸ್ಪೆಲ್ನಲ್ಲಿ ಕುಕ್ 40 ಎಸೆತಗಳಲ್ಲಿ 25 ರನ್ ಬಾರಿಸಿದ್ದರು.

ಫಾಫ್ ಡುಪ್ಲೆಸಿಸ್ (2018): ಈ ಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಮೂರನೇ ಸ್ಥಾನದಲ್ಲಿದ್ದಾರೆ. 2018 ರಲ್ಲಿ ಕೇಪ್ ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಎಸೆದ ಒಂದೇ ಸ್ಪೆಲ್ನಲ್ಲಿ ಫಾಫ್ 18 ಎಸೆತಗಳಲ್ಲಿ 23 ರನ್ ಬಾರಿಸಿ ಅಬ್ಬರಿಸಿದ್ದರು. ಈ ಮೂವರನ್ನು ಹೊರತುಪಡಿಸಿ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಸ್ಪೆಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು ವಿಶೇಷ.
