
ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು 106 ರನ್ಗಳ ಬೃಹತ್ ಅಂತರದಿಂದ ಮಣಿಸಿರುವ ಭಾರತ ಈ ಗೆಲುವಿನೊಂದಿಗೆ 5 ಟೆಸ್ಟ್ ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಳಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ 13 ಟೆಸ್ಟ್‌ಗಳಲ್ಲಿ ಇದು 7 ನೇ ಗೆಲುವು, ಆದರೆ ಈ ಪಂದ್ಯದ ಗೆಲುವಿನ ರುಚಿ ಹಿಂದಿನ 6 ಗೆಲುವುಗಳಿಗಿಂತ ಭಿನ್ನವಾಗಿದೆ.

ಏಕೆಂದರೆ ಈ ಗೆಲುವಿನ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ವಿಶಾಖಪಟ್ಟಣಂನಲ್ಲಿನ ಗೆಲುವು ಎಷ್ಟು ವಿಶೇಷವಾಗಿದೆ ಎಂದರೆ ಇದೀಗ ರೋಹಿತ್, ಭಾರತದ ಅತ್ಯಂತ ಯಶಸ್ವಿ ನಾಯಕ ಧೋನಿಯನ್ನು ಹಿಂದಿಕ್ಕಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಬರೆದಿರುವ ರೋಹಿತ್ ಈಗ ಭಾಝ್ ಬಾಲ್ ಯುಗದಲ್ಲಿ ಇಂಗ್ಲೆಂಡ್ ತಂಡವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿದ ಮೊದಲ ಏಷ್ಯಾದ ನಾಯಕ ಎನಿಸಿಕೊಂಡಿದ್ದಾರೆ.

ಇದರೊಂದಿಗೆ ರೋಹಿತ್ ಶರ್ಮಾ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಎಂಎಸ್ ಧೋನಿ ಭಾರತ ಗೆದ್ದಿರುವ 295 ಪಂದ್ಯಗಳಲ್ಲಿ ತಂಡದ ಭಾಗವಾಗಿದ್ದರು. ಇದೀಗ ವೈಜಾಗ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಪಂದ್ಯ ರೋಹಿತ್ ಅವರ 296 ನೇ ಪಂದ್ಯವಾಗಿದ್ದು, ಟೀಂ ಇಂಡಿಯಾ ಗೆದ್ದ ಅಧಿಕ ಪಂದ್ಯಗಳಲ್ಲಿ ಇದೀಗ ರೋಹಿತ್, ಧೋನಿಯನ್ನು ಹಿಂದಿಕ್ಕಿದ್ದಾರೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ಭಾರತ ಗೆದ್ದ 313 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ.

ನಾಯಕನಾಗಿ ರೋಹಿತ್ ಅವರ ಟೆಸ್ಟ್ ವೃತ್ತಿಜೀವನವನ್ನು ಗಮನಿಸಿದರೆ, ಅವರು 54 ಪ್ರತಿಶತ ಪಂದ್ಯಗಳನ್ನು ಗೆದ್ದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅವರ ಗೆಲುವಿನ ಶೇಕಡಾವಾರು 50 ಆಗಿದೆ. ನಾಯಕನಾಗಿ ರೋಹಿತ್ ಅವರ ಗೆಲುವಿನ ದಾಖಲೆ ಅದ್ಭುತವಾಗಿದೆ.

ಆದರೆ, ಕಳೆದ ಕೆಲ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಆಗಿ ರೋಹಿತ್ ವೈಫಲ್ಯ ಕಂಡಿರುವುದು ಟೀಂ ಇಂಡಿಯಾಗೆ ಆತಂಕ ತಂದಿದೆ. ರೋಹಿತ್ ಟೆಸ್ಟ್‌ನಲ್ಲಿ ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಕೂಡ ಗಳಿಸಿಲ್ಲ. ಭಾರತ ಖಂಡಿತವಾಗಿಯೂ ಸರಣಿಯನ್ನು ಸಮಬಲಗೊಳಿಸಿದೆ. ಆದರೆ, ಈ ಸರಣಿಯನ್ನು ಗೆಲ್ಲಬೇಕಾದರೆ ರೋಹಿತ್ ಮತ್ತೆ ಫಾರ್ಮ್‌ಗೆ ಮರಳುವುದು ಬಹಳ ಮುಖ್ಯ.