
ಕನ್ನಡಿಗ ಕರುಣ್ ನಾಯರ್ಗೆ ಅವರ ಪ್ರೀತಿಯ ಕ್ರಿಕೆಟ್ ಮತ್ತೊಂದು ಅವಕಾಶ ನೀಡಿದರೂ ಅದ್ಯಾಕೋ ಅದೃಷ್ಟ ಮಾತ್ರ ಅವರ ಕೈ ಹಿಡಿಯುತ್ತಿಲ್ಲ. ದೇಶೀ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕನ್ನಡಿಗ ಕರುಣ್ ನಾಯರ್ಗೆ ಬರೋಬ್ಬರಿ 8 ವರ್ಷಗಳ ನಂತರ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅದರಲ್ಲೂ ತಾನು ಪದಾರ್ಪಣೆ ಮಾಡಿದ್ದ ಇಂಗ್ಲೆಂಡ್ ತಂಡದ ವಿರುದ್ಧವೇ.

ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್ ನಾಯರ್, ಆಂಗ್ಲರ ನೆಲದಲ್ಲಿ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ತಿರುವು ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದುವರೆಗೂ ಕರುಣ್ ನಾಯರ್ ಅಂದುಕೊಂಡಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.

ದುರಾದೃಷ್ಟವೆಂದಂರೆ ಕರುಣ್ ನಾಯರ್ ಇದುವರೆಗೆ ಇಂಗ್ಲೆಂಡ್ ನೆಲದಲ್ಲಿ ಐದು ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಈ ಐದು ಇನ್ನಿಂಗ್ಸ್ನಲ್ಲೂ ಕರುಣ್ ನಾಯರ್ ಒಂದು ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾಗಿದೆ. ವಿಪರ್ಯಾಸವೆಂದರೆ ಕರುಣ್ ಉತ್ತಮ ಆರಂಭ ಪಡೆದ ಬಳಿಕ ವಿಕೆಟ್ ಒಪ್ಪಿಸುತ್ತಿರುವುದು ಅವರನ್ನು ಯೋಚಿಸುವಂತೆ ಮಾಡಿದೆ.

ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಕರುಣ್ ನಾಯರ್ಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಆದಾಗ್ಯೂ ಎರಡನೇ ಇನ್ನಿಂಗ್ಸ್ನಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಎರಡನೇ ಇನ್ನಿಂಗ್ಸ್ನಲ್ಲೂ ನಿರಾಶೆ ಮೂಡಿಸಿದ ಕರುಣ್ ಕೇವಲ 20 ರನ್ಗಳಿಗೆ ಸುಸ್ತಾದರು. ದುರಾದೃಷ್ಟವೆಂಬಂತೆ ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಬೇಕಾಯಿತು.

ಹೀಗಾಗಿ ಎರಡನೇ ಟೆಸ್ಟ್ನಿಂದ ಕರುಣ್ಗೆ ಗೇಟ್ಪಾಸ್ ಎಂಬ ಮಾತುಗಳಿದ್ದವು. ಆದಾಗ್ಯೂ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮುಂಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕರುಣ್ ನಾಯರ್ ಉತ್ತಮ ಆರಂಭ ಪಡೆದು 30 ರನ್ಗಳ ಗಡಿ ದಾಟಿದರು. ಆದರೆ 31 ರನ್ಗಳಿಗೆ ಕರುಣ್ ತಮ್ಮ ವಿಕೆಟ್ ಕೈಚೆಲ್ಲಿದರು.

ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲೂ ಕರುಣ್ ನಾಯರ್ಗೆ ಬಿಗ್ ಇನ್ನಿಂಗ್ಸ್ ಕಟ್ಟುವ ಅವಕಾಶವಿತ್ತು. ಆದರೆ ಇಲ್ಲೂ ಸಹ ಕರುಣ್ಗೆ ಅದೃಷ್ಟ ಕೈಕೊಟ್ಟಿತು. ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್ನಲ್ಲೂ ಉತ್ತಮ ಆರಂಭ ಪಡೆದಿದ್ದ ಕರುಣ್ 26 ರನ್ಗಳ ವೈಯಕ್ತಿಕ ಸ್ಕೋರ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಮೊದಲೆರಡು ಪಂದ್ಯಗಳಲ್ಲಿ ಫೇಲ್ ಆಗಿದ್ದ ಕರುಣ್ರನ್ನು ಮೂರನೇ ಪಂದ್ಯದಿಂದ ಕೈಬಿಡಬೇಕು ಎಂಬ ಕೂಗು ಜೋರಾಗಿತ್ತು. ಆದಾಗ್ಯೂ ಲಾರ್ಡ್ಸ್ ಟೆಸ್ಟ್ಗೆ ಕರುಣ್ ಅವರನ್ನು ಆಯ್ಕೆ ಮಾಡಲಾಗಿದೆ. ಎಂದಿನಂತೆ ಮೊದಲ ಇನ್ನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದ ಕರುಣ್, ರಾಹುಲ್ ಜೊತೆ ಉತ್ತಮ ಜೊತೆಯಾಟ ಕಟ್ಟಿದರಾದರೂ, ಮತ್ತೊಮ್ಮೆ ಸೆಟಲ್ ಆದ ಬಳಿಕ ವಿಕೆಟ್ ಕೈಚೆಲಿದರು. ಈ ಇನ್ನಿಂಗ್ಸ್ನಲ್ಲಿ 40 ರನ್ ಬಾರಿಸಿ ಅರ್ಧಶತಕದಂಚಿಗೆ ಬಂದಿದ್ದ ಕರುಣ್ಗೆ ದುರಾದೃಷ್ಟ ಸರಿಯಾಗಿ ಹೆಗಲೆರಿದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.