
ಭಾರತದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ದೊಡ್ಡ ದಾಖಲೆ ಮಾಡಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೇಗಿ ಅರ್ಷದೀಪ್ ಸಿಂಗ್ ಟೀಂ ಇಂಡಿಯಾಗೆ ಬಲಿಷ್ಠ ಆರಂಭ ನೀಡಿದರು.

ಅವರು ತಮ್ಮ ಮೊದಲ 2 ಓವರ್‌ಗಳಲ್ಲಿ ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿ, ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನೂ ಅರ್ಷದೀಪ್ ಸಿಂಗ್ ಮಾಡಿದ್ದಾರೆ.

2022ರ ನವೆಂಬರ್‌ನಲ್ಲಿ ಅರ್ಷದೀಪ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಕೇವಲ 2 ವರ್ಷಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಅವರು ತಮ್ಮ ಮೊದಲ ಓವರ್‌ನಲ್ಲಿಯೇ ಫಿಲ್ ಸಾಲ್ಟ್ ಅವರ ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಫಿಲ್ ಸಾಲ್ಟ್ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು. ಈ ವಿಕೆಟ್‌ನೊಂದಿಗೆ ಅರ್ಷದೀಪ್ಸಿಂಗ್ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಯುಜುವೇಂದ್ರ ಚಾಹಲ್‌ರನ್ನು ಸರಿಗಟ್ಟಿದರು. ಇದರ ನಂತರ, ಅವರು ತಮ್ಮ ಮುಂದಿನ ಓವರ್‌ನಲ್ಲಿ ಬೆನ್ ಡಕೆಟ್ ಅವರನ್ನು ಬಲಿಪಶುವಾಗಿ ಮಾಡಿ ಚಹಾಲ್ ದಾಖಲೆಯನ್ನು ಮುರಿದರು.

ಅರ್ಷದೀಪ್ ಸಿಂಗ್‌ಗಿಂತ ಮೊದಲು, ಯುಜ್ವೇಂದ್ರ ಚಹಾಲ್ 96 ವಿಕೆಟ್‌ಗಳೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಇದೀಗ ಅರ್ಷದೀಪ್ ಸಿಂಗ್ ಕೇವಲ 61 ಪಂದ್ಯಗಳಲ್ಲಿ 97 ವಿಕೆಟ್ ಪಡೆಯುವ ಮೂಲಕ ಚಹಾಲ್ ದಾಖಲೆಯನ್ನು ಮುರಿದಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭುವನೇಶ್ವರ್ ಕುಮಾರ್ ಟಿ20 ಕ್ರಿಕೆಟ್‌ನಲ್ಲಿ 90 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರಲ್ಲದೆ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಕೂಡ ತಲಾ 89 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.