ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಇದೀಗ ಮೊದಲ ಏಕದಿನ ಪಂದ್ಯಕ್ಕೆ ಆಯ್ಕೆಯಾದ ರೋಚಕ ಕಹಾನಿಯನ್ನು ತೆರೆದಿಟ್ಟಿದ್ದಾರೆ. ಪಂದ್ಯದ ನಂತರ ಮಾತನಾಡಿದ ಶ್ರೇಯಸ್, ಬುಧವಾರ ರಾತ್ರಿ ನಾಯಕ ರೋಹಿತ್ ಶರ್ಮಾ ಫೋನ್ ಮಾಡಿ ತಂಡಕ್ಕೆ ಆಯ್ಕೆಯಾದ ಬಗ್ಗೆ ತಿಳಿಸಿದರು ಎಂದಿದ್ದಾರೆ.
ವಾಸ್ತವವಾಗಿ, ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಬಲ ಮೊಣಕಾಲಿನ ಊತದಿಂದಾಗಿ ಈ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಆಡುವ 11 ರ ಬಳಗಕ್ಕೆ ಆಯ್ಕೆ ಮಾಡಲಾಗಿತ್ತು. ನಾಯಕ ರೋಹಿತ್ ಶರ್ಮಾ ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಯ್ಯರ್, ಸಂಕಷ್ಟದ ಸಮಯದಲ್ಲಿ ಕೇವಲ 36 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದರು.
ಪಂದ್ಯದ ನಂತರ, ಪ್ರಸಾರಕರೊಂದಿಗೆ ಮಾತನಾಡಿದ ಶ್ರೇಯಸ್ ಅಯ್ಯರ್, ನಾಯಕ ರೋಹಿತ್ ಶರ್ಮಾ ತಡರಾತ್ರಿ ಕರೆ ಮಾಡಿದಾಗ ನಾಗ್ಪುರದಲ್ಲಿ ಆಡುವ ಬಗ್ಗೆ ತಿಳಿದುಕೊಂಡೆ. ಇದು ಎಂತಹ ಹಾಸ್ಯಾಸ್ಪದ ಕಥೆ ಎಂದರೆ. ನಾನು ನಿನ್ನೆ ರಾತ್ರಿ ಸಿನಿಮಾ ನೋಡುತ್ತಿದ್ದೆ, ಹೆಚ್ಚು ಹೊತ್ತು ಎಚ್ಚರವಾಗಿರಬಹುದು ಎಂದುಕೊಂಡಿದ್ದೆ. ಆದರೆ ಸಿನಿಮಾ ನೋಡುತ್ತಿದ್ದ ನನಗೆ ನಾಯಕ ರೋಹಿತ್ ಅವರಿಂದ ಕರೆ ಬಂತು.
ಈ ವೇಳಿ ರೋಹಿತ್, ವಿರಾಟ್ ಕೊಹ್ಲಿ ಅವರ ಮೊಣಕಾಲು ಊದಿಕೊಂಡಿರುವುದರಿಂದ ಬಹುಶಃ ನೀವು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಿದರು. ಇದಾದ ನಂತರ ನನ್ನ ಕೋಣೆಗೆ ಓಡಿದ ನಾನು ತಕ್ಷಣವೇ ನಿದ್ರೆಗೆ ಜಾರಿದೆ ಎಂದಿದ್ದಾರೆ.
ಅಯ್ಯರ್ ಈ ರೀತಿಯಾಗಿ ಹೇಳಿಕೆ ನೀಡಿರುವುದು ಮೊದಲಿಗೆ ಅವರು ಟೀಂ ಇಂಡಿಯಾದ ಪ್ಲಾನ್ ಎ ನ ಭಾಗವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಅಂದರೆ, ಒಂದು ವೇಳೆ ಕೊಹ್ಲಿ ಇಂಜುರಿಯಾಗಿರದಿದ್ದರೆ, ಅಯ್ಯರ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಎಂಬುದು ಇದರಿಂದ ಖಚಿತವಾಗಿದೆ. ಹಾಗಾದರೆ ಪ್ರಶ್ನೆ ಏನೆಂದರೆ, ಕಟಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಅವರನ್ನು ಆಡಿಸಲಾಗುತ್ತದೆಯೇ? ಎಂಬುದು.
ಏಕೆಂದರೆ ಅಯ್ಯರ್ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ್ದಾರೆ. ಆದಾಗ್ಯೂ ವಿರಾಟ್ ಕೊಹ್ಲಿ ಇಂಜುರಿಯಿಂದ ಚೇತರಿಸಿಕೊಂಡರೆ ಕೊಹ್ಲಿಯನ್ನು ತಂಡದಲ್ಲಿ ಆಡಿಸಲೇಬೇಕು. ಏಕೆಂದರೆ ಚಾಂಪಿಯನ್ಸ್ ಟ್ರೊಫಿ ತಯಾರಿಗೆ ಇನ್ನುಳಿದಿರುವುದೇ 2 ಪಂದ್ಯ. ಹೀಗಾಗಿ ಫಾರ್ಮ್ನಲ್ಲಿರುವ ಅಯ್ಯರ್ಗೂ ಸ್ಥಾನ ನೀಡಬೇಕು. ಇದರ ಜೊತೆಗೆ ಕೊಹ್ಲಿಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕು. ಆದ್ದರಿಂದ 2ನೇ ಏಕದಿನ ಪಂದ್ಯದಲ್ಲಿ ಯಾರು ಹೊರಹೋಗುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.