
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಭಾರತದ ಟೆಸ್ಟ್ ದಾಖಲೆ ಕೂಡ ಅದ್ಭುತವಾಗಿದೆ. ಆದರೆ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಗಾಯದ ಕಾರಣ ಎರಡನೇ ಟೆಸ್ಟ್‌ನಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

ಈ ಇಬ್ಬರೊಂದಿಗೆ ಬರೋಬ್ಬರಿ 4467 ದಿನಗಳ ನಂತರ ಅಂದರೆ ಸುಮಾರು 12 ವರ್ಷಗಳ ನಂತರ ಟೀಂ ಇಂಡಿಯಾ ಈ ನಾಲ್ವರು ಸ್ಟಾರ್ ಆಟಗಾರರಿಲ್ಲದೆ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಆ ನಾಲ್ವರು ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.

ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ವೈಯಕ್ತಿಕ ಕಾರಣಗಳಿಂದ ಮೊದಲೆರಡು ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕೊಹ್ಲಿ ವಿದೇಶದಲ್ಲಿದ್ದು, ಅವರು ಟೆಸ್ಟ್ ಸರಣಿಯಿಂದಲೇ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.

ರವೀಂದ್ರ ಜಡೇಜಾ: ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಸದ್ಯ ಎನ್ಸಿಎನಲ್ಲಿರುವ ರವೀಂದ್ರ ಜಡೇಜಾ ಕೂಡ ಟೆಸ್ಟ್ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚೇತೇಶ್ವರ ಪೂಜಾರ: ಒಂದು ಸಮಯದಲ್ಲಿ ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಚೇತೇಶ್ವರ ಪೂಜಾರ ಕಳಪೆ ಫಾರ್ಮ್ನಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಪ್ರಸ್ತುತ ರಣಜಿ ಆಡುತ್ತಿರುವ ಪೂಜಾರ, ಮುಂದಿನ 3 ಟೆಸ್ಟ್ಗಳಿಗೆ ತಂಡದಲ್ಲಿ ಆಯ್ಕೆಯಾಗುವ ಸಾಧ್ಯತೆಗಳಿವೆ

ಅಜಿಂಕ್ಯ ರಹಾನೆ: ಪೂಜಾತರಂತೆ ರಹಾನೆ ಕೂಡ ಟೀಂ ಇಂಡಿಯಾದಿಂದ ಹೊರಗುಳಿದು ವರ್ಷಗಳೇ ಕಳೆದಿವೆ. ಪ್ರಸ್ತುತ ಪೂಜಾರ ರಣಜಿಯಲ್ಲಿ ಫಾರ್ಮ್ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದರೆ, ರಹಾನೆ ಮಾತ್ರ ರಣಜಿಯಲ್ಲೂ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಹೀಗಾಗಿ ರಹಾನೆ ಟೆಸ್ಟ್ ತಂಡ ಸೇರುವ ಸಾಧ್ಯತೆಗಳು ತೀರ ಕಡಿಮೆ.

ಇದೀಗ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಆಡಲು ಸಿದ್ದತೆ ನಡೆಸಿರುವ ಟೀಂ ಇಂಡಿಯಾ 12 ವರ್ಷಗಳ ನಂತರ ಈ ನಾಲ್ವರು ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದೆ. ಈ ಅನುಭವಿಗಳ ಅಲಭ್ಯತೆಯ ನಡುವೆ ತಂಡ ಯಾವ ರೀತಿ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.