
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕಾನ್ಪುರ ಟೆಸ್ಟ್‌ನ ನಾಲ್ಕನೇ ದಿನದಂದು ಟೀಂ ಇಂಡಿಯಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅದ್ಭುತ ಅರ್ಧಶತಕವನ್ನು ಬಾರಿಸಿದರು. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ, ಈ ಸರಣಿಯಲ್ಲಿ ಟೀಮ್ ಇಂಡಿಯಾದ ನಂಬರ್ ಒನ್ ಕೀಪರ್ ಆಗಿ ಆಡುತ್ತಿರುವ ಸಹಾ ತಮ್ಮ 39 ನೇ ಟೆಸ್ಟ್‌ನಲ್ಲಿ ತಮ್ಮ ಆರನೇ ಅರ್ಧಶತಕವನ್ನು ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸಹಾ 61 ರನ್ ಗಳಿಸಿ ಅಜೇಯರಾಗಿ ಮರಳಿದರು.

ಈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನ ನಂತರ, ಸಹಾ ಇಂಜುರಿ ಸಮಸ್ಯೆ ಎದುರಿಸಬೇಕಾಯ್ತು. ಇದರಿಂದಾಗಿ ಅವರು ಮೂರನೇ ದಿನದಲ್ಲಿ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಟೀಂ ಇಂಡಿಯಾ ಸಂಕಷ್ಟದಲ್ಲಿರುವ ನಾಲ್ಕನೇ ದಿನದಲ್ಲಿ ಸಹಾ ಬ್ಯಾಟಿಂಗ್‌ಗೆ ಇಳಿದು ಮೊದಲು ಶ್ರೇಯಸ್ ಅಯ್ಯರ್ ಜೊತೆ 64 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ನಂತರ ಅಕ್ಷರ್ ಪಟೇಲ್ ಜತೆಗೂಡಿದ 67 ರನ್ ಗಳ ಅಜೇಯ ಜೊತೆಯಾಟ ತಂಡವನ್ನು ಉತ್ತಮ ಸ್ಥಿತಿಗೆ ತಂದಿತು.

ಸಾಹ 4 ವರ್ಷಗಳ ನಂತರ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದ್ದಾರೆ. ಈ ಹಿಂದೆ 2017ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊ ಟೆಸ್ಟ್‌ನಲ್ಲಿ ಸಹಾ 67 ರನ್ ಗಳಿಸಿದ್ದರು. ಆ ನಂತರ ಆಡಿದ 11 ಟೆಸ್ಟ್‌ಗಳಲ್ಲಿ ವಿಫಲರಾಗಿದ್ದರು.

ವಿಶೇಷವೆಂದರೆ ವೃದ್ಧಿಮಾನ್ ಸಹಾ ನ್ಯೂಜಿಲೆಂಡ್ ವಿರುದ್ಧ ರನ್ ಗಳಿಸಲು ಇಷ್ಟಪಡುತ್ತಾರೆ. ಅವರ 6 ಅರ್ಧಶತಕಗಳಲ್ಲಿ ಮೂರು ನ್ಯೂಜಿಲೆಂಡ್ ವಿರುದ್ಧ ಬಂದಿವೆ. ಇದಕ್ಕೂ ಮೊದಲು 2016ರಲ್ಲಿ ಅವರು ಕೋಲ್ಕತ್ತಾ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 54 ಮತ್ತು 58 ರನ್ ಗಳಿಸಿದ್ದರು ಮತ್ತು ಎರಡೂ ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದರು.

ಅವರು ನ್ಯೂಜಿಲೆಂಡ್ ವಿರುದ್ಧದ 4 ಟೆಸ್ಟ್‌ಗಳ 5 ಇನ್ನಿಂಗ್ಸ್‌ಗಳಲ್ಲಿ 87 ರ ಸರಾಸರಿಯೊಂದಿಗೆ 174 ರನ್ ಗಳಿಸಿದ್ದಾರೆ. ಇತರ ಯಾವುದೇ ತಂಡದ ವಿರುದ್ಧ ಅವರ ಪ್ರದರ್ಶನ ಹೀಗಿಲ್ಲ. ಜೊತೆಗೆ ತಮ್ಮ ಮೂರು ಅರ್ಧಶತಕಗಳ ನಂತರವೂ ಸಹ ಅಜೇಯರಾಗಿ ಉಳಿದಿದ್ದಾರೆ.