- Kannada News Photo gallery Cricket photos IPL 2022: Ahmedabad IPL team not to compete in tournament?
IPL 2022: ಐಪಿಎಲ್ ಹೊಸ ತಂಡ ಬ್ಯಾನ್ ಆಗುವ ಸಾಧ್ಯತೆ..!
IPL 2022: ಒಟ್ಟಿನಲ್ಲಿ ಐಪಿಎಲ್ ಮೆಗಾ ಹರಾಜಿಗೆ ತಿಂಗಳುಗಳು ಮಾತ್ರ ಉಳಿದಿರುವಾಗ ಇದೀಗ ಹೊಸ ಫ್ರಾಂಚೈಸಿ ಕುರಿತಾದ ಚರ್ಚೆಗಳು ತಾರಕಕ್ಕೇರಿದ್ದು, ಅಂತಿಮವಾಗಿ ಬಿಸಿಸಿಐ CVC ಕ್ಯಾಪಿಟಲ್ ಪಾರ್ಟ್ನರ್ಸ್ ಕಂಪೆನಿಗೆ ಅಹಮದಾಬಾದ್ ಫ್ರಾಂಚೈಸಿಯನ್ನು ಒಪ್ಪಿಸಲಿದೆಯಾ ಅಥವಾ ಹೊಸ ಉದ್ಯಮಿಗಳಿಗೆ ತಂಡವನ್ನು ಮಾರಾಟ ಮಾಡಲಿದೆಯಾ ಕಾದು ನೋಡಬೇಕಿದೆ.
Updated on: Nov 28, 2021 | 4:15 PM

ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ನ 8 ಫ್ರಾಂಚೈಸಿಗಳು ಮೆಗಾ ಹರಾಜಿನ ಸಿದ್ದತೆಯಲ್ಲಿದ್ದರೆ, ಮತ್ತೊಂದೆಡೆ ಹೊಸ ತಂಡವೊಂದು ವಿವಾದದಿಂದ ಹೊರಬೀಳುವ ಆತಂಕವನ್ನು ಎದುರಿಸುತ್ತಿದೆ. ಹೌದು, ಪ್ರಸ್ತುತ ಇರುವ 8 ತಂಡಗಳ ಜೊತೆಗೆ ಅಹಮದಾಬಾದ್ ಹಾಗೂ ಲಕ್ನೋ ತಂಡಗಳು ಸೇರ್ಪಡೆಯಾಗಿದೆ. 7,090 ಕೋಟಿ ರೂ. ನೀಡಿ ಲಕ್ನೋ ಫ್ರಾಂಚೈಸ್ ಅನ್ನು RPSG ಗ್ರೂಪ್ ತನ್ನದಾಗಿಸಿಕೊಂಡಿದೆ. ಹಾಗೆಯೇ CVC ಕ್ಯಾಪಿಟಲ್ ಪಾರ್ಟ್ನರ್ಸ್ ಅಹಮದಾಬಾದ್ ಫ್ರಾಂಚೈಸ್ ಅನ್ನು 5625 ಕೋಟಿ ರೂ. ನೀಡಿ ಖರೀದಿಸಿದೆ. ಆದರೆ CVC ಕ್ಯಾಪಿಟಲ್ ಪಾರ್ಟ್ನರ್ಸ್, ಬೆಟ್ಟಿಂಗ್ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದು, ಹೀಗಾಗಿ ಈ ಫ್ರಾಂಚೈಸಿಯನ್ನು ಮುಂದುವರೆಸಬೇಕಾ ಬೇಡ್ವಾ? ಎಂಬ ಸಂದಿಗ್ಧತೆಯಲ್ಲಿ ಸಿಲುಕಿದೆ ಬಿಸಿಸಿಐ.

ಏಕೆಂದರೆ 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ವೀಕ್ಷಕರು ಟೂರ್ನಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು. ಆದರೆ ಇದೀಗ ಬೆಟ್ಟಿಂಗ್ ವ್ಯವಹಾರದೊಂದಿಗೆ ನೇರ ಸಂಪರ್ಕ ಹೊಂದಿರುವ ಕಂಪೆನಿಗೆ ಹೊಸ ಫ್ರಾಂಚೈಸಿಯನ್ನು ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಪ್ರಮುಖ ಸ್ಪೋರ್ಟ್ಸ್ ಮಾಧ್ಯಮವೊಂದು ಬಿಸಿಸಿಐ ಅನ್ನು ಸಂಪರ್ಕಿಸಿದ್ದು, ಅವರ ಕಡೆಯಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸ್ಪೋರ್ಟ್ಸ್ ಡೆಸ್ಕ್ ಪ್ರತಿನಿಧಿಗಳು ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಆ ವಿಷಯದ ಬಗ್ಗೆ ನನ್ನನ್ನು ಕೇಳಬೇಡಿ, ಇದರ ಬಗ್ಗೆ ಕಾರ್ಯದರ್ಶಿಯನ್ನು ಕೇಳಿ. ಅಹಮದಾಬಾದ್ ಐಪಿಎಲ್ ತಂಡದ ಸ್ಥಿತಿ ಮತ್ತು ಸಮಸ್ಯೆಯ ಬಗ್ಗೆ ನಮಗೆ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ. ಇದಾಗ್ಯೂ ಅಹಮದಾಬಾದ್ ಫ್ರಾಂಚೈಸಿ ಮುಂದಿನ ಸೀಸನ್ನಲ್ಲಿ ಆಡಲಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ಬಿಸಿಸಿಐ ಅಧಿಕಾರಿ ಕೂಡ ತಯಾರಿಲ್ಲ.

ಮತ್ತೋರ್ವ ಅಧಿಕಾರಿಯನ್ನು ಈ ಬಗ್ಗೆ ವಿಚಾರಿಸಿದಾಗ, ಅಹಮದಾಬಾದ್ ಫ್ರಾಂಚೈಸಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹೊಸ ಫ್ರಾಂಚೈಸಿ ಆಡಲಿದೆಯಾ ಅಥವಾ ರದ್ದಾಗಲಿದೆಯಾ ಎಂಬುದು ಕೆಲ ದಿನಗಳಲ್ಲಿ ಹೊರಬೀಳಲಿದೆ ಎಂದು ತಿಳಿಸಿದ್ದಾರೆ. ಅಂದರೆ ಇಲ್ಲಿ ಬೆಟ್ಟಿಂಗ್ ಕಂಪೆನಿಯಲ್ಲಿ ಹೂಡಿಕೆ ಮಾಡಿರುವ ಫ್ರಾಂಚೈಸಿ ಐಪಿಎಲ್ ತಂಡ ಖರೀದಿಸಿರುವುದು ಇದೀಗ ಬಿಸಿಸಿಐಗೂ ಹೊಸ ತಲೆನೋವಾಗಿ ಪರಿಣಮಿಸಿದೆ.

CVC ಕ್ಯಾಪಿಟಲ್ ಪಾರ್ಟ್ನರ್ಸ್ ಖಾಸಗಿ ಇಕ್ವಿಟಿ ಮತ್ತು ಹೂಡಿಕೆ ಸಲಹಾ ಸಂಸ್ಥೆಯಾಗಿದ್ದು, ಯುರೋಪಿಯನ್ ಮತ್ತು ಏಷ್ಯಾದ ಅನೇಕ ಬೆಟ್ಟಿಂಗ್ ಹಾಗೂ ಜೂಜಾಟ ಕಂಪೆನಿಗಳು ಹೂಡಿಕೆಯನ್ನು ಮಾಡಿದೆ. ಇದೀಗ ಕಂಪೆನಿಯ ಬೆಟ್ಟಿಂಗ್ ವ್ಯವಹಾರ ವಿಚಾರ ಬಿಸಿಸಿಐಗೆ ಹೊಸ ತಲೆನೋವುಂಟು ಮಾಡಿದೆ. ಅತ್ತ ಅದಾನಿ ಗ್ರೂಪ್ ಕೂಡ ಬಿಸಿಸಿಐ ಮುಂದಿನ ನಡೆಯೇನು ಎಂಬುದನ್ನು ಎದುರು ನೋಡುತ್ತಿದೆ ಎಂದು ಉನ್ನತ ಮೂಲವೊಂದು ತಿಳಿಸಿದೆ. ಏಕೆಂದರೆ ಸಿವಿಸಿ ಕಂಪೆನಿಯ ಫ್ರಾಂಚೈಸಿಯನ್ನು ತಿರಸ್ಕರಿಸಿದರೆ ಮತ್ತೊಮ್ಮೆ ತಂಡದ ಬಿಡ್ಡಿಂಗ್ಗಾಗಿ ಅದಾನಿ ಗ್ರೂಪ್ ಎದುರು ನೋಡುತ್ತಿದೆ.

ಒಟ್ಟಿನಲ್ಲಿ ಐಪಿಎಲ್ ಮೆಗಾ ಹರಾಜಿಗೆ ತಿಂಗಳುಗಳು ಮಾತ್ರ ಉಳಿದಿರುವಾಗ ಇದೀಗ ಹೊಸ ಫ್ರಾಂಚೈಸಿ ಕುರಿತಾದ ಚರ್ಚೆಗಳು ತಾರಕಕ್ಕೇರಿದ್ದು, ಅಂತಿಮವಾಗಿ ಬಿಸಿಸಿಐ CVC ಕ್ಯಾಪಿಟಲ್ ಪಾರ್ಟ್ನರ್ಸ್ ಕಂಪೆನಿಗೆ ಅಹಮದಾಬಾದ್ ಫ್ರಾಂಚೈಸಿಯನ್ನು ಒಪ್ಪಿಸಲಿದೆಯಾ ಅಥವಾ ಹೊಸ ಉದ್ಯಮಿಗಳಿಗೆ ತಂಡವನ್ನು ಮಾರಾಟ ಮಾಡಲಿದೆಯಾ ಕಾದು ನೋಡಬೇಕಿದೆ.
