ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ಗೂ ಮುನ್ನ ರಿಟೈನ್ ಆಟಗಾರರ ಪಟ್ಟಿ ಸಲ್ಲಿಸಲು ಇನ್ನು ಕೇವಲ ಒಂದು ದಿನ ಮಾತ್ರ ಉಳಿದಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾರನ್ನೆಲ್ಲಾ ಉಳಿಸಿಕೊಳ್ಳಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದಾಗ್ಯೂ ಆರ್ಸಿಬಿ ಫ್ರಾಂಚೈಸಿಯ ಮೂಲಗಳ ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಂಡದಲ್ಲೇ ಇರಲಿರುವುದು ಖಚಿತವಾಗಿದೆ. ಇನ್ನುಳಿದ ಆಟಗಾರರ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಆರ್ಸಿಬಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಆಯ್ಕೆಯಾಗಿದೆ ಎಂದು ತಿಳಿಸಲಾಗಿತ್ತು. ಅಷ್ಟೇ ಅಲ್ಲದೆ 3ನೇ ಹಾಗೂ 4ನೇ ಆಟಗಾರರಾಗಿ ಯುಜುವೇಂದ್ರ ಚಹಲ್, ಹರ್ಷಲ್ ಪಟೇಲ್, ದೇವದತ್ ಪಡಿಕ್ಕಲ್ ಹಾಗೂ ಮೊಹಮ್ಮದ್ ಸಿರಾಜ್ ಹೆಸರುಗಳು ಕೇಳಿ ಬಂದಿತ್ತು. ಆದರೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಕೆಎಸ್ ಭರತ್.
ಹೌದು, ಆರ್ಸಿಬಿ ಮೂಲಗಳ ಮಾಹಿತಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೆಎಸ್ ಭರತ್ ಅವರನ್ನೂ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದೆ. ಭರತ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆರ್ಸಿಬಿ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ಸೀಸನ್ನಲ್ಲಿ ಎಬಿ ಡಿವಿಲಿಯರ್ಸ್ ಇಲ್ಲದ ಕಾರಣ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನ್ನು ಕೂಡ ಆರ್ಸಿಬಿ ಖರೀದಿಸಬೇಕಿದೆ.
ಆದರೆ ಪ್ರಸ್ತುತ ತಂಡದಲ್ಲಿರುವ ಕೆಎಸ್ ಭರತ್ ಉತ್ತಮ ಪ್ರದರ್ಶನ ನೀಡಿರುವ ಕಾರಣ ಅವರನ್ನೇ ಉಳಿಸಿಕೊಳ್ಳುವುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸರ್ ಆರ್ಸಿಬಿ ತಂಡದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಆರ್ಸಿಬಿ ತಂಡವು ಮೂರನೇ ಆಟಗಾರನಾಗಿ ಯುಜುವೇಂದ್ರ ಚಹಲ್ ಅಥವಾ ದೇವದತ್ ಪಡಿಕ್ಕಲ್ ಅವರನ್ನು ತಂಡದಲ್ಲೇ ಇರಿಸಿಕೊಳ್ಳುವ ಬಯಸಿದೆ. ಒಂದು ವೇಳೆ ಚಹಲ್ ಅವರನ್ನು ರಿಟೈನ್ ಮಾಡಿದರೆ, ಕೆಎಸ್ ಭರತ್ಗೆ ಅವರು ನಾಲ್ಕನೇ ಆಟಗಾರನಾಗಿ ತಂಡದಲ್ಲೇ ಉಳಿಸಿಕೊಳ್ಳಬಹುದು. ಹೀಗಾಗಿ ನಾಲ್ಕನೇ ಸ್ಥಾನಕ್ಕಾಗಿ ಪಡಿಕ್ಕಲ್ ಹಾಗೂ ಕೆಎಸ್ ಭರತ್ ಹೆಸರುಗಳು ಚರ್ಚೆಯಲ್ಲಿದೆ ಎಂದು ಆರ್ಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಒಟ್ಟಿನಲ್ಲಿ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ರಿಟೈನ್ ಆಗುವುದು ಬಹುತೇಕ ಖಚಿತವಾಗಿದ್ದು, ಇದಾಗ್ಯೂ ಮೂರನೇ ಹಾಗೂ ನಾಲ್ಕನೇ ಆಟಗಾರ ಯಾರೆಂಬುದರ ಬಗ್ಗೆ ಚರ್ಚೆಗಳು ಮುಂದುವರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
Published On - 8:14 pm, Sun, 28 November 21