
ಹೈದರಾಬಾದ್ ಉಪ್ಪಲ್‌ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ದ್ವಿಶತಕ ಸಿಡಿಸಿ ಮಿಂಚಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 149 ಎಸೆತಗಳನ್ನು ಎದುರಿಸಿದ ಗಿಲ್, 9 ಬೃಹತ್ ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 208 ರನ್ ಚಚ್ಚಿದರು. ಇದರೊಂದಿಗೆ ಶುಭ್ಮನ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ 10ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರೆ, ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ 5ನೇ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೂ ಭಾಜನರಾದರು.

ಕೇವಲ 23 ವರ್ಷ ಮತ್ತು 132 ದಿನಗಳ ವಯಸ್ಸಿನಲ್ಲಿ ದ್ವಿಶತಕ ಸಿಡಿಸುವುದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಗಿಲ್ ಬರೆದರು. ಕಳೆದ ತಿಂಗಳು ಅಂದರೆ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ ಸಿಡಿಸಿದ್ದ ಇಶಾನ್ ಕಿಶನ್, ಕೇವಲ 24 ವರ್ಷ 145 ದಿನಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ಗಿಲ್ ಮುರಿದಿದ್ದಾರೆ.

ಇಷ್ಟೇ ಅಲ್ಲ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು. 23 ವರ್ಷಗಳ ಹಿಂದೆ, ಅಂದರೆ 1999ರಂದು ಹೈದರಾಬಾದ್‌ನಲ್ಲಿ ಅಜೇಯ 186 ರನ್ ಗಳಿಸಿದ್ದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಗಿಲ್ ಮುರಿದರು.

ತಮ್ಮ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್‌ಗಳನ್ನು ಬಾರಿಸಿದ ಗಿಲ್, ಏಕದಿನ ವೃತ್ತಿಜೀವನದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನೂ ಬರೆದರು.

ಗಿಲ್ ಸತತ 3 ಸಿಕ್ಸರ್‌ಗಳೊಂದಿಗೆ ದ್ವಿಶತಕ ಪೂರೈಸುವುದರೊಂದಿಗೆ ವಿಶ್ವದಾಖಲೆಯನ್ನೂ ಬರೆದರು. ಇದರೊಂದಿಗೆ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಮತ್ತು ವಿಶ್ವದ ಎಂಟನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಒಟ್ಟಾರೆ, ಇದು ಏಕದಿನದಲ್ಲಿ 10ನೇ ದ್ವಿಶತಕವಾಗಿದೆ.