ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಜಯ ಸಾಧಿಸಿದೆ. ತನ್ನ ಮೂರನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಿದ ಶಫಾಲಿ ಪಡೆ ಬರೋಬ್ಬರಿ 83 ರನ್‌ಗಳಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಸೂಪರ್-ಸಿಕ್ಸ್ ಸುತ್ತಿಗೂ ಎಂಟ್ರಿಕೊಟ್ಟಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗಧಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಇದು ಮೊದಲ ಎರಡು ಪಂದ್ಯಗಳಿಗಿಂತ ಕಡಿಮೆ ಸ್ಕೋರ್ ಆಗಿತ್ತು.
ಭಾರತದ ಪರ ಗೊಂಗಡಿ ತ್ರಿಶಾ 51 ಎಸೆತಗಳಲ್ಲಿ ಗರಿಷ್ಠ 57 ರನ್ ಗಳಿಸಿದರು. ಆದಾಗ್ಯೂ, ತಂಡದ ನಾಯಕಿ ಶಫಾಲಿ ವರ್ಮಾ ಈ ಬಾರಿ ಬೇಗ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಹಿರಿಯ ಸದಸ್ಯೆ ರಿಚಾ ಘೋಷ್ 35 ಎಸೆತಗಳಲ್ಲಿ 33 ರನ್ ಗಳಿಸಿ ತಂಡಕ್ಕೆ ನೆರವಾದರು.
ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಶ್ವೇತಾ ಸೆಹ್ರಾವತ್ ಆಕ್ರಮಣಕಾರಿ ಫಾರ್ಮ್ ತೋರದಿದ್ದರೆ ಭಾರತ ತಂಡ ಈ ಸ್ಕೋರ್ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಶ್ವೇತಾ ಕೇವಲ 10 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಕಟ್ಟಿದರು.
ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿದಲ್ಲದೆ, ಆರನೇ ಓವರ್‌ಗೆ ಕೇವಲ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತು. ಆದರೆ ಇಲ್ಲಿಂದ ಮನ್ನತ್ ಕಶ್ಯಪ್, ಅರ್ಚನಾ ದೇವಿ ಸಿಂಗ್ ಮತ್ತು ಸೋನಮ್ ಯಾದವ್ ಅವರ ಸ್ಪಿನ್ ತ್ರಿವಳಿ ದಾಳಿ ಎದುರಾಳಿ ತಂಡಕ್ಕೆ ಸಂಕಷ್ಟ ತಂದೊಡ್ಡಿತು.
ಎಡಗೈ ಸ್ಪಿನ್ನರ್ ಮನ್ನತ್ ನಾಲ್ಕು ಓವರ್‌ಗಳಲ್ಲಿ 12 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ಅರ್ಚನಾ ದೇವಿ 14 ರನ್ ನೀಡಿ ಮೂರು ವಿಕೆಟ್ ಪಡೆದರು. ಈ ಇಬ್ಬರ ಸ್ಪಿನ್ ಮ್ಯಾಜಿಕ್ ಆಧಾರದಲ್ಲಿ ಭಾರತ ಸ್ಕಾಟ್ಲೆಂಡ್‌ನ ಉಳಿದ 8 ವಿಕೆಟ್‌ಗಳನ್ನು ಕೇವಲ 21 ರನ್‌ಗಳಿಗೆ ಕಬಳಿಸಿ 66 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಸತತ ಮೂರನೇ ಜಯ ದಾಖಲಿಸಿತು.
Published On - 10:50 am, Thu, 19 January 23