
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನಿರ್ಣಾಯಕ ಘಟ್ಟ ತಲುಪಿದ್ದು, ಸರಣಿ 1-1 ರಿಂದ ಸಮಬಲಗೊಂಡಿದೆ. ಇದೀಗ ವಿಶಾಖಪಟ್ಟಣಂನಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ಟೀಂ ಇಂಡಿಯಾ ಪ್ರಯತ್ನಿಸುತ್ತಿದ್ದರೆ, ಇತ್ತ ದಕ್ಷಿಣ ಆಫ್ರಿಕಾ 10 ವರ್ಷಗಳ ನಂತರ ಭಾರತದಲ್ಲಿ ಏಕದಿನ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಆದರೆ ಇದಕ್ಕೂ ಮುನ್ನ ಈ ಮೈದಾನದಲ್ಲಿ ಭಾರತದ ದಾಖಲೆ ಹೇಗಿದೆ ಎಂಬುದನ್ನು ನೋಡೋಣ.

ವಿಶಾಖಪಟ್ಟಣಂ ಮೈದಾನದಲ್ಲಿ ಭಾರತದ ದಾಖಲೆ ಹೇಗಿದೆ ಎಂಬುದನ್ನು ನೋಡುವುದಾದರೆ.. ಈ ಮೈದಾನದಲ್ಲಿ ಭಾರತ ಇದುವರೆಗೆ 10 ಏಕದಿನ ಪಂದ್ಯಗಳನ್ನಾಡಿದೆ. ಇದರಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಭಾರತ, ಎರಡರಲ್ಲಿ ಮಾತ್ರ ಸೋತಿದೆ. ಉಳಿದಂತೆ ಒಂದು ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದೆ. ಅಂದರೆ ಈ ಮೈದಾನದಲ್ಲಿ ಭಾರತ ಮೇಲುಗೈ ಸಾಧಿಸಿದೆ ಎಂಬುದನ್ನು ಅಂಕಿ ಅಂಶಗಳಿಂದ ತಿಳಿಯಬಹುದು.

ಆದಾಗ್ಯೂ, ಈ ಮೈದಾನದಲ್ಲಿ ಟೀಂ ಇಂಡಿಯಾದ ತನ್ನ ಕೊನೆಯ ಏಕದಿನ ಗೆಲುವನ್ನು 2019 ರಲ್ಲಿ ಸಾಧಿಸಿತ್ತು. ಆ ಬಳಿಕ 2023 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ಈಗ, ಆರು ವರ್ಷಗಳ ನಂತರ, ಟೀಂ ಇಂಡಿಯಾ ಈ ಮೈದಾನದಲ್ಲಿ ಮತ್ತೆ ಗೆಲ್ಲಲು ನೋಡುತ್ತಿದೆ.

ಮತ್ತೊಂದೆಡೆ, ಈ ಮೈದಾನ ದಕ್ಷಿಣ ಆಫ್ರಿಕಾಕ್ಕೆ ಸಂಪೂರ್ಣವಾಗಿ ಅಪರಿಚಿತವಾಗಿದೆ. ಪ್ರೋಟಿಯಸ್ ಇಲ್ಲಿ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿಲ್ಲ. ಆದಾಗ್ಯೂ 2019 ರಲ್ಲಿ ಆಫ್ರಿಕಾ ತಂಡ ಇಲ್ಲಿ ಒಂದು ಟೆಸ್ಟ್ ಮತ್ತು 2022 ರಲ್ಲಿ ಒಂದು ಟಿ 20 ಪಂದ್ಯವನ್ನು ಆಡಿದ್ದು, ಎರಡರಲ್ಲೂ ಸೋತಿದೆ. ಇದರರ್ಥ ವಿಶಾಖಪಟ್ಟಣಂ ನೆಲದಲ್ಲಿ ದಕ್ಷಿಣ ಆಫ್ರಿಕಾದ ದಾಖಲೆ ಶೂನ್ಯವಾಗಿಯೇ ಉಳಿದಿದೆ.

ಟೀಂ ಇಂಡಿಯಾ: ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ರಿಷಭ್ ಪಂತ್ (ಉಪನಾಯಕ/ವಿಕೆಟ್ ಕೀಪರ್), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಧ್ರುವ ಜುರೆಲ್ ಮತ್ತು ಅರ್ಶ್ದೀಪ್ ಸಿಂಗ್.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಡೆವಾಲ್ಡ್ ಬ್ರೂಯಿಸ್, ನಾಂಡ್ರೆ ಬರ್ಗರ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ರೂಬಿನ್ ಹರ್ಮನ್, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸೆನ್, ಐಡೆನ್ ಮಾರ್ಕ್ರಾಮ್, ಲುಂಗಿ ಎನ್ಗಿಡಿ, ರಿಯಾನ್ ರಿಕೆಲ್ಟನ್, ಪ್ರೆನೆಲನ್ ಸುಬ್ರಾಯೆನ್.