- Kannada News Photo gallery Cricket photos IND vs SA South African star pacer Lungi Ngidi ruled out of T20I series against India due to injury
IND vs SA: ಆಫ್ರಿಕಾ ತಂಡಕ್ಕೆ ಆಘಾತ; ಭಾರತ ವಿರುದ್ಧದ ಟಿ20 ಸರಣಿಯಿಂದ ಸ್ಟಾರ್ ವೇಗಿ ಔಟ್..!
IND vs SA: ಟೀಮ್ ಇಂಡಿಯಾದ ಒಂದು ತಿಂಗಳ ಸುದೀರ್ಘ ಪ್ರವಾಸವು ಡಿಸೆಂಬರ್ 10 ರ ಭಾನುವಾರದಿಂದ ಪ್ರಾರಂಭವಾಗಲಿದೆ. ಎಲ್ಲಾ ಮೂರು ಸ್ವರೂಪಗಳ ಈ ಪ್ರವಾಸವು ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದ್ದು, ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.
Updated on: Dec 09, 2023 | 7:19 AM

ಟೀಮ್ ಇಂಡಿಯಾದ ಒಂದು ತಿಂಗಳ ಸುದೀರ್ಘ ಪ್ರವಾಸವು ಡಿಸೆಂಬರ್ 10 ರ ಭಾನುವಾರದಿಂದ ಪ್ರಾರಂಭವಾಗಲಿದೆ. ಎಲ್ಲಾ ಮೂರು ಸ್ವರೂಪಗಳ ಈ ಪ್ರವಾಸವು ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದ್ದು, ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.

ಟೀಂ ಇಂಡಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಆಫ್ರಿಕಾ ತಂಡದ ಬಲಗೈ ವೇಗದ ಬೌಲರ್ ಲುಂಗಿ ಎನ್‌ಗಿಡಿ ಇಡೀ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈ ಸುದ್ದಿಯನ್ನು ಸ್ವತಃ ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಕಟಿಸಿದೆ.

2023 ರ ಏಕದಿನ ವಿಶ್ವಕಪ್‌ನಲ್ಲಿ ಲುಂಗಿ ಎನ್‌ಗಿಡಿ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಟಿ20 ಸರಣಿಗೂ ಮುನ್ನ ಅವರು ಸಂಪೂರ್ಣ ಫಿಟ್ ಆಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು ಆದರೆ ಇಲ್ಲಿಯವರೆಗೆ ಫಿಟ್ ಆಗಲು ಸಾಧ್ಯವಾಗಿಲ್ಲ.

ಇದೀಗ ಈ ಟಿ20 ಸರಣಿಯಲ್ಲಿ ಎನ್‌ಗಿಡಿ ಸ್ಥಾನಕ್ಕೆ ಬ್ಯೂರನ್ ಹೆಂಡ್ರಿಕ್ಸ್ ಅವರನ್ನು ಬದಲಿ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದೆ ಹೆಂಡ್ರಿಕ್ಸ್ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಟಿ20 ಮತ್ತು ಏಕದಿನ ಸರಣಿಯ ನಂತರ ದಕ್ಷಿಣ ಆಫ್ರಿಕಾ ಕೂಡ ತವರಿನಲ್ಲಿ ಭಾರತದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ.

ಅಂತಹ ಪರಿಸ್ಥಿತಿಯಲ್ಲಿ, ಎನ್‌ಗಿಡಿಯವರ ಇಂಜುರಿ ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಲಿದೆ. ಎನ್‌ಗಿಡಿ ಅವರನ್ನು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಕಳುಹಿಸಲಾಗಿದ್ದು, ವರದಿ ಬಂದ ನಂತರ ಅವರು ಡಿಸೆಂಬರ್ 26 ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗುತ್ತದೆ.

ಟಿ20 ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳಿಗೆ ಎನ್‌ಗಿಡಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಇದಲ್ಲದೇ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಡಿಸೆಂಬರ್ 14ರಿಂದ 17ರವರೆಗೆ 4 ದಿನಗಳ ಅಭ್ಯಾಸ ಪಂದ್ಯಕ್ಕೂ ಆಯ್ಕೆಯಾಗಿದ್ದರು. ಈಗ ಇದರಲ್ಲೂ ಆಡಲು ಸಾಧ್ಯವಾಗುವುದಿಲ್ಲ. ಭಾರತದ ವಿರುದ್ಧ 5 ಟಿ20 ಪಂದ್ಯಗಳನ್ನಾಡಿರುವ ಎನ್‌ಗಿಡಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಎನ್‌ಗಿಡಿ ಬದಲಿಗೆ ತಂಡಕ್ಕೆ ಆಯ್ಕೆಯಾಗಿರುವ ಮಧ್ಯಮ ವೇಗಿ ಬುರಾನ್ ಹೆಂಡ್ರಿಕ್ಸ್ ಇದುವರೆಗೆ ಕೇವಲ 19 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 25 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಹೆಂಡ್ರಿಕ್ಸ್ ಭಾರತದ ವಿರುದ್ಧ 2014 ಮತ್ತು 2019 ರಲ್ಲಿ 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಾಕತಾಳೀಯವೆಂಬಂತೆ, ಎರಡೂ ಪಂದ್ಯಗಳಲ್ಲಿ ಅವರು ರೋಹಿತ್ ಶರ್ಮಾ ಅವರ ವಿಕೆಟ್ ಪಡೆದಿದ್ದರು. ಆದರೆ, ಈ ಬಾರಿ ರೋಹಿತ್ ಟಿ20 ಸರಣಿಯ ಭಾಗವಾಗಿಲ್ಲ.




