ಪ್ರಸ್ತುತ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಕೊಲಂಬೊದಲ್ಲಿ ನಡೆದ ಮೊದಲ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವು ದಾಖಲೆಗಳು ನಿರ್ಮಿಸಿದ್ದರು. ಇದೀಗ ಈ ಸರಣಿಯ ಎರಡನೇ ಪಂದ್ಯ ಕೂಡ ಕೊಲಂಬೊದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲೂ ರೋಹಿತ್ಗೆ ದಾಖಲೆ ಸೃಷ್ಟಿಸುವ ಅವಕಾಶವಿದೆ.
ರೋಹಿತ್ ಶರ್ಮಾ ಮಾತ್ರವಲ್ಲದೆ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೂ ವಿಶೇಷ ದಾಖಲೆ ನಿರ್ಮಿಸುವ ಅವಕಾಶವಿದೆ. ಈ ಇಬ್ಬರು ಆಟಗಾರರು, ಮಾಜಿ ದಿಗ್ಗಜ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯುವ ಸನಿಹದಲಿದ್ದಾರೆ. ಇದಲ್ಲದೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಯಾವುದೇ ತಂಡದ ವಿರುದ್ಧ 100 ಪಂದ್ಯಗಳನ್ನು ಗೆದ್ದ ಸಾಧನೆಯನ್ನೂ ಮಾಡಲಿದೆ.
ನಾಯಕ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿಯುವ ಅವಕಾಶ ರೋಹಿತ್ಗಿದೆ.
ವಾಸ್ತವವಾಗಿ ಧೋನಿ ತಮ್ಮ ಏಕದಿನ ವೃತ್ತಿಜೀವನದಲ್ಲಿ ಒಟ್ಟು 10773 ರನ್ ಕಲೆಹಾಕಿದ್ದಾರೆ.ಇದೀಗ ರೋಹಿತ್ ಶರ್ಮಾ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 7 ರನ್ ಬಾರಿಸಿದರೆ, ಧೋನಿಯನ್ನು ಹಿಂದಿಕ್ಕಲಿದ್ದಾರೆ. ರೋಹಿತ್ ಇದುವರೆಗೆ ಏಕದಿನದಲ್ಲಿ 10767 ರನ್ ಗಳಿಸಿದ್ದಾರೆ.
ಧೋನಿ ಮಾತ್ರವಲ್ಲದೆ ಕ್ರಿಸ್ ಗೇಲ್ ದಾಖಲೆಯನ್ನೂ ಮುರಿಯುವ ಅವಕಾಶ ರೋಹಿತ್ಗಿದೆ. ಕ್ರಿಸ್ ಗೇಲ್ ತಮ್ಮ 301 ಪಂದ್ಯಗಳ ಏಕದಿನ ವೃತ್ತಿಜೀವನದಲ್ಲಿ ಒಟ್ಟು 331 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 263 ಪಂದ್ಯಗಳಲ್ಲಿ 326 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಎರಡನೇ ಪಂದ್ಯದಲ್ಲಿ ರೋಹಿತ್ 6 ಸಿಕ್ಸರ್ ಬಾರಿಸಿದರೆ ಗೇಲ್ ದಾಖಲೆ ಮುರಿಯಲಿದೆ.
ರೋಹಿತ್ರಂತೆ ಕೊಹ್ಲಿಗೂ ದಾಖಲೆ ಮುರಿಯುವ ಅವಕಾಶವಿದ್ದು, ವಿರಾಟ್ ಕೊಹ್ಲಿ ಇದುವರೆಗೆ ಆಡಿರುವ 293 ಏಕದಿನ ಪಂದ್ಯಗಳಲ್ಲಿ 58ರ ಸರಾಸರಿಯಲ್ಲಿ 13872 ರನ್ ಗಳಿಸಿದ್ದಾರೆ. ಮುಂದಿನ ಪಂದ್ಯದಲ್ಲಿ 128 ರನ್ ಗಳಿಸಿದರೆ 14 ಸಾವಿರ ರನ್ ಗಡಿ ಮುಟ್ಟಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಹಾಗೂ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಇಲ್ಲಿಯವರೆಗೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಮಾತ್ರ ಈ ಸಾಧನೆ ಮಾಡಿದ್ದಾರೆ.
ಇದಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಸಾವಿರ ರನ್‌ಗಳ ಗಡಿ ತಲುಪಲು ವಿರಾಟ್ ಕೇವಲ 92 ರನ್‌ಗಳ ಅಂತರದಲ್ಲಿದ್ದಾರೆ. ಎರಡನೇ ಪಂದ್ಯದಲ್ಲಿ ಕೊಹ್ಲಿ 92 ರನ್ ಗಳಿಸಿದರೆ, ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ಕುಮಾರ ಸಂಗಕ್ಕಾರ ಮತ್ತು ರಿಕಿ ಪಾಂಟಿಂಗ್ ಮಾತ್ರ ಈ ಮೈಲಿಗಲ್ಲನ್ನು ದಾಟಿದ್ದಾರೆ.