ಭಾರತದ ಶೂಟರ್ ಮನು ಭಾಕರ್ ಅವರ ಪ್ಯಾರಿಸ್ ಒಲಿಂಪಿಕ್ಸ್ ಅಂತ್ಯವಾಗಿದೆ. ಒಟ್ಟು ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮನು ಎರಡು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡಿ ಮನು, ಆ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮತ್ತೊಂದು ಪದಕ ಗೆದ್ದುಕೊಂಡಿದ್ದರು.
ಇನ್ನು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡರು. ಇದಾಗ್ಯೂ ಒಂದೇ ಆವೃತ್ತಿಯ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಹಿಂದೆ ಭಾರತವನ್ನು ಪ್ರತಿನಿಧಿಸಿ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದಿದ್ದ ನಾರ್ಮನ್ ಪ್ರಿಚರ್ಡ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
1990 ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ (ಬ್ರಿಟಿಷ್) ಅವರು 200 ಮೀಟರ್ ಹರ್ಡಲ್ಸ್ ಮತ್ತು 200 ಮೀಟರ್ ಓಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಈ ಮೂಲಕ ಸ್ವಾತಂತ್ರ ಪೂರ್ವದಲ್ಲಿ ಭಾರತದ ಪರ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ್ದರು.
ಇದಾದ ಬಳಿಕ ಭಾರತದ ಯಾವುದೇ ಸ್ಪರ್ಧಿ ಒಲಿಂಪಿಕ್ಸ್ ಆವೃತ್ತಿಯೊಂದರಲ್ಲಿ ಎರಡು ಪದಕಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಶೂಟಿಂಗ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸ್ವಾತಂತ್ರದ ಬಳಿಕ ಭಾರತದ ಪರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಅತೀ ಹೆಚ್ಚು ಪದಕ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.
ಹಾಗೆಯೇ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ಎರಡು ಪದಕಗಳನ್ನು ಸಾಧಕರ ಪಟ್ಟಿಗೂ ಮನು ಭಾಕರ್ ಹೆಸರು ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈ ಸಾಧನೆ ಮಾಡಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್ನ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಸುಶೀಲ್ ಕುಮಾರ್, 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಇನ್ನು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದ ಪಿವಿ ಸಿಂಧು, 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಇದೀಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೇ ಎರಡು ಮೆಡಲ್ಗಳನ್ನು ಗೆಲ್ಲುವ ಮೂಲಕ ಮನು ಭಾಕರ್, 128 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
Published On - 2:22 pm, Sat, 3 August 24