ಭಾರತ ಕ್ರಿಕೆಟ್ ತಂಡ ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದ್ದು ಟೆಸ್ಟ್ ಸರಣಿ ಆಡುತ್ತಿದೆ. ಈಗ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಡಿ. 22 ರಿಂದ 26 ರ ವರೆಗೆ ಎರಡನೇ ಟೆಸ್ಟ್ ಆಯೋಜಿಸಲಾಗಿದೆ. ಈ ಪ್ರವಾಸ ಮುಗಿದ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಮೊದಲ ಟಿ20 ಪಂದ್ಯ 2023 ಜನವರಿ 3 ರಂದು ನಡೆಯಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಇನ್ನಷ್ಟೆ ಪ್ರಕಟಿಸಬೇಕಿದೆ. ಬಿಸಿಸಿಐ ಆಯ್ಕೆ ಸಮಿತಿ ಟಿ20 ಸರಣಿಯಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ಸಿಗಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಟಿ20 ಸರಣಿಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ ನೋಡುವುದಾದರೆ...
ಓಪನರ್: ಇಶಾನ್ ಕಿಶನ್ ಓಪನರ್ ಆಗಿ ತಂಡಕ್ಕೆ ಆಯ್ಕೆ ಆಗುವುದು ಖಚಿತ. ರಿಷಭ್ ಪಂತ್ ಕೂಡ ಇರಲಿದ್ದಾರೆ. ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ ಸಂಜು ಸ್ಯಾಮ್ಸನ್ ಓಪನರ್ ಸ್ಥಾನಕ್ಕೆ ಆಯ್ಕೆ ಆಗಲಿದ್ದಾರೆ. ಕೆಎಲ್ ರಾಹುಲ್ಗೆ ಕೂಡ ವಿಶ್ರಾಂತಿ ನೀಡುವ ಸಂಭವವಿದೆ.
ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಲಿರುವ ಕಾರಣ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಆಯ್ಕೆ ಆಗಬಹುದು.
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ದೀಪಕ್ ಹೂಡ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಆಯ್ಕೆ ಆಗುವ ಸಾಧ್ಯತೆ ಇದೆ. ಹರ್ಷಲ್ ಪಟೇಲ್ ಕೂಡ ರೇಸ್ನಲ್ಲಿದ್ದಾರೆ.
ಬೌಲರ್ಗಳು: ಭುವನೇಶ್ವರ್ ಕುಮಾರ್ ಪ್ರಮುಖ ವೇಗಿಯಾಗಿದ್ದಾರೆ. ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್ ಹಾಗೂ ಮೊಹಮ್ಮದ್ ಸಿರಾಜ್ ಮೊದಲ ಆಯ್ಕೆ ಆಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಇರಲಿದ್ದಾರೆ. ಕುಲ್ದೀಪ್ ಯಾದವ್ ಕೂಡ ಸ್ಥಾನ ಪಡೆದುಕೊಂಡರೆ ಅಚ್ಚರಿ ಪಡಬೇಕಿಲ್ಲ.
ಭಾರತ ಸಂಭಾವ್ಯ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ಉಪ ನಾಯಕ), ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶುಭ್ಮನ್ ಗಿಲ್ಲ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್.
ಶ್ರೀಲಂಕಾ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿದೆ. ಮೊದಲ ಟಿ20 ಜನವರಿ 3 ರಂದು ನಡೆಯಲಿದೆ. ದ್ವಿತೀಯ ಟಿ20 ಜ. 5, ತೃತೀಯ ಟಿ20 ಜ. 7ಕ್ಕೆ ಆಯೋಜಿಸಲಾಗಿದೆ. ಅಂತೆಯೆ ಮೊದಲ ಏಕದಿನ ಜ. 10, ಎರಡನೇ ಮತ್ತು ಮೂರನೇ ಏಕದಿನ ಕ್ರಮವಾಗಿ ಜ. 12 ಮತ್ತು 15 ರಂದು ನಡೆಯಲಿದೆ.
Published On - 10:57 am, Fri, 16 December 22