- Kannada News Photo gallery Cricket photos IND vs W R Ashwin becomes only 3rd Indian bowler to achieve feat after Kumble Harbhajan
IND vs WI: 5 ವಿಕೆಟ್, ಅಂಡರ್ಸನ್ ದಾಖಲೆ ಉಡೀಸ್! ಮೊದಲ ದಿನವೇ ಹಲವು ದಾಖಲೆ ಬರೆದ ಅಶ್ವಿನ್..!
Ravichandran Ashwin 5 Wickets: ಪಂದ್ಯದ ಮೊದಲ ದಿನವೇ ತನ್ನು ಅನುಭವವನ್ನು ಧಾರೆ ಎರೆದ ಅಶ್ವಿನ್, ವಿಂಡೀಸ್ ಪಾಳಯದ ಐದು ವಿಕೆಟ್ ಉರುಳಿಸಿ ಕೆರಿಬಿಯನ್ನರನ್ನು ಕೇವಲ 150 ರನ್ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
Updated on:Jul 13, 2023 | 6:09 AM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದ ಅಶ್ವಿನ್, ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ತನ್ನನ್ನು ಕಡೆಗಣಿಸಿದ್ದ ಆಯ್ಕೆ ಮಂಡಳಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಡೊಮಿನಿಕಾದಲ್ಲಿ ಆರಂಭವಾಗಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ತನ್ನ ಅನುಭವವನ್ನು ಧಾರೆ ಎರೆದ ಅಶ್ವಿನ್, ವಿಂಡೀಸ್ ಪಾಳಯದ ಐದು ವಿಕೆಟ್ ಉರುಳಿಸಿ ಕೆರಿಬಿಯನ್ನರನ್ನು ಕೇವಲ 150 ರನ್ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಮೊದಲ ಟೆಸ್ಟ್ನ ಮೊದಲ ದಿನದಂದು ಕೇವಲ24.3 ಓವರ್‌ಗಳನ್ನು ಬೌಲ್ ಮಾಡಿದ ಅಶ್ವಿನ್ 60 ರನ್ ನೀಡಿ 5 ವಿಕೆಟ್ ಪಡೆದರು. ಇದರೊಂದಿಗೆ ಹಲವು ದಾಖಲೆಗಳನ್ನು ಮುರಿದರು.

ಮೊದಲಿಗೆ ಮಾಜಿ ವಿಂಡೀಸ್ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ಅವರ ಮಗ ತೇಜ್ನಾರಾಯಣ್ ಚಂದ್ರಪಾಲ್ ಅವರ ವಿಕೆಟ್ ಉರುಳಿಸಿದ ಅಶ್ವಿನ್, ಕ್ರಿಕೆಟ್‌ನಲ್ಲಿ ತಂದೆ ಹಾಗೂ ಮಗನ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರು.

ಬಳಿಕ ಎರಡನೇ ವಿಕೆಟ್ ರೂಪದಲ್ಲಿ ನಾಯಕ ಕ್ರೇಗ್ ಬ್ರಾಥ್ವೈಟ್ ಅವರನ್ನು ಬಲಿ ಪಡೆದ ಅಶ್ವಿನ್, ಅಲ್ಜಾರಿ ಜೋಸೆಫ್ ರೂಪದಲ್ಲಿ ಮೂರನೇ ವಿಕೆಟ್ ಕಬಳಿಸಿದರು. ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು.

ಅಶ್ವಿನ್ ತಮ್ಮ 271ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, 707 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಎರಡನೇ ಸ್ಥಾನದಲ್ಲಿದ್ದರೆ, 953 ವಿಕೆಟ್ ಉರುಳಿಸಿರುವ ಕರ್ನಾಟಕ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ.

ಬಳಿಕ ಐದನೇ ವಿಕೆಟ್ ರೂಪದಲ್ಲಿ ಜೋಮೆಲ್ ವಾರಿಕನ್ ಅವರ ವಿಕೆಟ್ ಪಡೆದ ಅಶ್ವಿನ್, ವೆಸ್ಟ್ ಇಂಡೀಸ್ ವಿರುದ್ಧ ಐದನೇ ಬಾರಿಗೆ ಮತ್ತು ಕೆರಿಬಿಯನ್ ನಾಡಲ್ಲಿ ಮೂರನೇ ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದರು.

ಇದರೊಂದಿಗೆ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಮೊದಲ ಸಕ್ರಿಯ ಬೌಲರ್ ಎನಿಸಿಕೊಂಡಿದ್ದಾರೆ. ಅಶ್ವಿನ್ 93 ಟೆಸ್ಟ್‌ಗಳಲ್ಲಿ 33ನೇ ಬಾರಿ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಅಶ್ವಿನ್, ಇಂಗ್ಲೆಂಡ್ನ ದಿಗ್ಗಜ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನೂ ಹಿಂದಿಕ್ಕಿದ್ದಾರೆ.

ಆಂಡರ್ಸನ್ 181 ಪಂದ್ಯಗಳಲ್ಲಿ 32 ಬಾರಿ 5 ವಿಕೆಟ್ ಪಡೆದು ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಈಗ ಈ ದಾಖಲೆ ಅಶ್ವಿನ್ ಖಾತೆಗೆ ಜಮಾವಣೆಗೊಂಡಿದೆ. ಅಂದಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (67) ಅವರ ಹೆಸರಿನಲ್ಲಿದೆ.
Published On - 6:06 am, Thu, 13 July 23




