- Kannada News Photo gallery Cricket photos IND vs WI Ravindra Jadeja eyes Kapil Dev's ODI record vs West Indies
IND vs WI: ಕಾರ್ಟ್ನಿ ವಾಲ್ಷ್- ಕಪಿಲ್ ದೇವ್ ದಾಖಲೆ ಮುರಿಯುವ ಸನಿಹದಲ್ಲಿ ರವೀಂದ್ರ ಜಡೇಜಾ..!
Ravindra Jadeja: ಇದೀಗ ಈ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಇಬ್ಬರು ದಿಗ್ಗಜರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
Updated on: Jul 03, 2023 | 10:11 AM

ವಿಶ್ವಕಪ್ನಿಂದ ಹೊರಬಿದ್ದಿರುವ ವೆಸ್ಟ್ ಇಂಡೀಸ್ ಇದೀಗ ಜುಲೈನಲ್ಲಿ ಭಾರತ ವಿರುದ್ಧ ನಡೆಯಲ್ಲಿರುವ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳಿಗಾಗಿ ತಯಾರಿ ಆರಂಭಿಸಿದೆ. ಇತ್ತ ಟೀಂ ಇಂಡಿಯಾ ಆಟಗಾರರು ಒಬ್ಬೊಬ್ಬರಾಗಿ ವೆಸ್ಟ್ ಇಂಡೀಸ್ ತಲುಪುತ್ತಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತದ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್ ಕೂಡ ಪ್ರಾರಂಭವಾಗುತ್ತದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಇದೀಗ ಈ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಇಬ್ಬರು ದಿಗ್ಗಜರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ವಾಸ್ತವವಾಗಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಬರೆಯುವ ಸನಿಹದಲ್ಲಿ ಜಡೇಜಾ ಇದ್ದಾರೆ.

ಕೆರಿಬಿಯನ್ ಲೆಜೆಂಡ್ ಕಾರ್ಟ್ನಿ ವಾಲ್ಷ್ ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಇದುವರೆಗೆ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾ ಪರ ಕಪಿಲ್ ದೇವ್ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಪ್ರಸ್ತುತ ಕ್ರಿಕೆಟ್ ಆಡುತ್ತಿಲ್ಲ. ಹೀಗಾಗಿ ಜಡೇಜಾಗೆ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಅವಕಾಶ ದೊರೆತಿದೆ.

ಪ್ರಸ್ತುತ ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಡೇಜಾ ಮೂರನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ 29 ಏಕದಿನ ಪಂದ್ಯಗಳನ್ನು ಆಡಿದ್ದು ಇದರಲ್ಲಿ 41 ವಿಕೆಟ್ ಪಡೆದಿದ್ದಾರೆ.

ಕೆರಿಬಿಯನ್ ದಿಗ್ಗಜ ಕಾರ್ಟ್ನಿ ವಾಲ್ಷ್ ಭಾರತದ ವಿರುದ್ಧ 38 ಏಕದಿನ ಪಂದ್ಯಗಳನ್ನಾಡಿದ್ದು ಇದರಲ್ಲಿ 44 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ, ಭಾರತದ ದಂತಕಥೆ ಕಪಿಲ್ ದೇವ್ ಕೆರಿಬಿಯನ್ ವಿರುದ್ಧದ 42 ಏಕದಿನ ಪಂದ್ಯಗಳಲ್ಲಿ 43 ವಿಕೆಟ್ ಪಡೆದು ಉಭಯ ತಂಡಗಳ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಆಡಲು ಈಗಾಗಲೇ ಬಾರ್ಬಡೋಸ್ ತಲುಪಿರುವ ಜಡೇಜಾ, ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಆಡಲಿರುವ ಮೂರು ಏಕದಿನ ಪಂದ್ಯಗಳಲ್ಲಿ ಇನ್ನು 4 ವಿಕೆಟ್ ಪಡೆದರೆ ಅಗ್ರಸ್ಥಾನಕ್ಕೇರಲಿದ್ದಾರೆ.



















