ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ಈ ಪ್ರವಾಸ ಜುಲೈ 12ರಿಂದ ಟೆಸ್ಟ್ ಸರಣಿಯೊಂದಿಗೆ ಆರಂಭವಾಗಲಿದೆ. ಆದರೆ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದ ಆಯ್ಕೆಯ ಬಗ್ಗೆ ಹಲವು ಮಾಜಿ ಟೀಂ ಇಂಡಿಯಾ ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ದಿಟ್ಟ ಪ್ರದರ್ಶನ ನೀಡಿದ ಹಲವು ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ ಎಂಬುದು ಇವರ ವಾದವಾಗಿದೆ.
ಇದೀಗ ಅವರ ಸಾಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಸೇರ್ಪಡೆಗೊಂಡಿದ್ದು, ತಂಡದ ಆಯ್ಕೆಯಲ್ಲಿ ಕೇವಲ ಐಪಿಎಲ್ ಪ್ರದರ್ಶನವನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಗುಡುಗಿರುವ ಜಾಫರ್, ಆಯ್ಕೆ ಮಂಡಳಿಯ ಮುಂದೆ ಪ್ರಮುಖವಾಗಿ 3 ಪ್ರಶ್ನೆಗಳನ್ನು ಇಟ್ಟಿದಾರೆ.
ಮೊದಲ ಪ್ರಶ್ನೆ: ಪ್ರಕಟವಾಗಿರುವ ಭಾರತ ಟೆಸ್ಟ್ ತಂಡದಲ್ಲಿ ನಾಲ್ವರು ಆರಂಭಿಕರಿಗೆ ಅವಕಾಶ ನೀಡಲಾಗಿದೆ. ವಾಸ್ತವವಾಗಿ 4 ಆರಂಭಿಕರ ಅವಶ್ಯಕತೆ ಏನು ಎಂದಿರುವ ಜಾಫರ್, ಈ 4 ಆಯ್ಕೆಯ ಬದಲಿಗೆ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆ ಮಾಡಬಹುದಿತ್ತು ಎಂದಿದ್ದಾರೆ.
ಎರಡನೇ ಪ್ರಶ್ನೆ: ಸರ್ಫರಾಜ್ರಂತೆ, ಅಭಿಮನ್ಯು ಈಶ್ವರನ್ ಮತ್ತು ಪ್ರಿಯಾಂಕ್ ಪಾಂಚಾಲ್ ಇಬ್ಬರೂ ರಣಜಿ ಮತ್ತು ಭಾರತ ಎ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದ ಮೂಲಕ ಇಬ್ಬರೂ ಬಹಳ ದಿನಗಳಿಂದ ಭಾರತ ಟೆಸ್ಟ್ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಈ ಇಬ್ಬರು ಐಪಿಎಲ್‌ನಲ್ಲಿ ಆಡದ ಕಾರಣ ಈ ಇಬ್ಬರೂ ಆಯ್ಕೆಯಾಗಲಿಲ್ಲವೇ?. ಆದರೆ ಈ ಇಬ್ಬರಿಗೂ ಮುಂಚೆ ರುತುರಾಜ್ ಗಾಯಕ್ವಾಡ್ ಇದ್ದಕ್ಕಿದ್ದಂತೆ ಈ ಸರತಿ ಸಾಲಿನಲ್ಲಿ ಮುಂದೆ ಬಂದಿದ್ದು ಹೇಗೆ? ಎಂದಿದ್ದಾರೆ.
3ನೇ ಪ್ರಶ್ನೆ: ಮೊಹಮ್ಮದ್ ಶಮಿಯನ್ನು ತಂಡದಿಂದ ರಿಲೀವ್ ಮಾಡಿರುವುದಕ್ಕೆ ಜಾಫರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಮುಗಿಸಿರುವ ಭಾರತಕ್ಕೆ ಸದ್ಯ ಒಂದು ತಿಂಗಳ ವಿಶ್ರಾಂತಿ ಸಿಕ್ಕಿದೆ. ಆದರೆ ಇದರ ಹೊರತಾಗಿಯೂ ಶಮಿ ಅವರಿಗೆ ವಿಶ್ರಾಂತಿ ನೀಡಿರುವುದು ಅಚ್ಚರಿ ತಂದಿದೆ. ಶಮಿ ಎಂಥ ಬೌಲರ್, ಹೆಚ್ಚು ಬೌಲಿಂಗ್ ಮಾಡಿದರೆ ಅವರು ಫಿಟ್ ಆಗುತ್ತಾರೆ, ಫಾರ್ಮ್ಗೆ ಬರುತ್ತಾರೆ. ಆದರೆ ಆಯ್ಕೆ ಮಂಡಳಿ ಇವರಿಗೆ ವಿಶ್ರಾಂತಿ ನೀಡಿದೆ ಎಂದು ಜಾಫರ್ ಅಸಮಾಧಾನ ಹೊರಹಾಕಿದ್ದಾರೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.
Published On - 11:42 am, Sun, 25 June 23