ಸ್ಪೋಟಕ ಶತಕ… ಟೆಸ್ಟ್ ಕ್ರಿಕೆಟ್ ಸ್ವರೂಪವನ್ನೇ ಬುಡಮೇಲು ಮಾಡಿದ ಟೀಮ್ ಇಂಡಿಯಾ
India vs Bangladesh 2nd Test: ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಪ್ರಥಮ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ ಚಹಾ ವಿರಾಮದ ವೇಳೆಗೆ 16 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 138 ರನ್ ಕಲೆಹಾಕಿದೆ. ಈ ನೂರ ಮೂವತ್ತೆಂಟು ರನ್ಗಳಲ್ಲಿ 100 ರನ್ ಮೂಡಿ ಬಂದಿರುವುದು ಕೇವಲ 10.1 ಓವರ್ಗಳಲ್ಲಿ ಎಂಬುದು ವಿಶೇಷ.
1 / 5
ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಅತೀ ಕಡಿಮೆ ಓವರ್ಗಳಲ್ಲಿ ಅರ್ಧಶತಕ ಹಾಗೂ ಶತಕಗಳನ್ನು ಪೂರೈಸುವ ಮೂಲಕ ಎಂಬುದು ವಿಶೇಷ. ಅಂದರೆ 147 ವರ್ಷಗಳ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 100 ರನ್ ಕಲೆಹಾಕಿದ ವಿಶ್ವ ದಾಖಲೆ ಇದೀಗ ಟೀಮ್ ಇಂಡಿಯಾ ಪಾಲಾಗಿದೆ.
2 / 5
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಕೇವಲ ಮೂರು ಓವರ್ಗಳಲ್ಲಿ 50 ರನ್ ಕಲೆಹಾಕಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ್ದ ಇಂಗ್ಲೆಂಡ್ (4.2 ಓವರ್) ತಂಡದ ದಾಖಲೆಯನ್ನು ಮುರಿದರು.
3 / 5
ಅರ್ಧಶತಕದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (23) ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೂಡಿದ ಗಿಲ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಟೀಮ್ ಇಂಡಿಯಾ ಕೇವಲ 10.1 ಓವರ್ಗಳಲ್ಲಿ 100 ರನ್ ಕಲೆಹಾಕಿ, ಟೆಸ್ಟ್ನಲ್ಲಿ ಅತೀ ವೇಗವಾಗಿ ನೂರು ರನ್ ಪೂರೈಸಿದ ಹೊಸ ವಿಶ್ವ ದಾಖಲೆ ಬರೆಯಿತು.
4 / 5
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಭಾರತ ತಂಡದ ಹೆಸರಿನಲ್ಲಿಯೇ ಇತ್ತು ಎಂಬುದು ವಿಶೇಷ. 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 12.2 ಓವರ್ಗಳಲ್ಲಿ ಶತಕ ಪೂರೈಸಿದ್ದರು. ಇದೀಗ ತನ್ನದೇ ದಾಖಲೆಯನ್ನು ಮುರಿದು 10.1 ಓವರ್ಗಳಲ್ಲಿ ಭಾರತ ತಂಡವು ಹೊಸ ಇತಿಹಾಸ ನಿರ್ಮಿಸಿದೆ.
5 / 5
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ (72) ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಅರ್ಧಶತಕದೊಂದಿಗೆ ಭಾರತದ ಪರ ಟೆಸ್ಟ್ನಲ್ಲಿ ಅತೀ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ 4ನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಿಷಭ್ ಪಂತ್ ಅಗ್ರಸ್ಥಾನದಲ್ಲಿದ್ದಾರೆ.