
ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಶುಭ್ಮನ್ ಗಿಲ್ ನಾಯಕತ್ವವಹಿಸಿಕೊಂಡಿದ್ದರೆ, ಶ್ರೇಯಸ್ ಅಯ್ಯರ್ ಉಪನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ಇಂಜುರಿಯಿಂದಾಗಿ ಬಹಳ ದಿನಗಳವರೆಗೆ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಅಯ್ಯರ್, ಇದೀಗ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಆದಾಗ್ಯೂ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ತಂಡವನ್ನು ಪ್ರಕಟಿಸುವಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಸಿಸಿಐ, ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಸಾಭೀತುಪಡಿಸಬೇಕಾಗಿದೆ ಎಂದಿದೆ. ಹೀಗಾಗಿ ಅಯ್ಯರ್ ಜನವರಿ 6 ರಂದು ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಲಿದ್ದು, ಅಲ್ಲಿ ತಮ್ಮ ಫಿಟ್ನೆಸ್ ಸಾಭೀತುಪಡಿಸಲಿದ್ದಾರೆ.

ಆದಾಗ್ಯೂ ಒಂದು ವೇಳೆ ಅಯ್ಯರ್ ತಮ್ಮ ಫಿಟ್ನೆಸ್ ಸಾಭೀತುಪಡಿಸದಿದ್ದರೆ, ಅವರ ಸ್ಥಾನದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಕೂಡ ಸಿದ್ಧವಿದ್ದು, ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಬದಲಿಯಾಗಿ ಆಡಿದ್ದ ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ ಈ ಸರಣಿಯಲ್ಲೂ ಅಯ್ಯರ್ ಬದಲಿಗೆ ಅವರು ಆಡಬಹುದು.

ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ರುತುರಾಜ್ ಅವರನ್ನು ಕೈಬಿಟ್ಟಿರುವುದಕ್ಕೆ ಬಿಸಿಸಿಐ ವಿರುದ್ಧ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಾವಂತ ಆಟಗಾರನನ್ನು ಆಯ್ಕೆ ಮಾಡದಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಆದರೆ ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದರಲ್ಲಿ ಯಾವುದೇ ಅನುಮಾವಿಲ್ಲ.

ಏಕದಿನ ಸರಣಿಗೆ ಭಾರತ ತಂಡ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್.