
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು (India Squad) ಪ್ರಕಟಿಸಲಾಗಿದೆ. 18 ಸದಸ್ಯರ ಈ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ರಿಷಭ್ ಪಂತ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ...

ಕೆಎಲ್ ರಾಹುಲ್: ಭಾರತ ಟೆಸ್ಟ್ ತಂಡದ ಆಧಾರಸ್ತಂಭವಾಗಿರುವ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಗೂ ಆಯ್ಕೆಯಾಗಿದ್ದಾರೆ. ಅತ್ತ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಪ್ರಸಿದ್ಧ್ ಕೃಷ್ಣ: ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಮತ್ತೊಮ್ಮೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇಂಗ್ಲೆಂಡ್ ಪಿಚ್ ವೇಗಿಗಳಿಗೆ ಹೆಚ್ಚಿನ ಸಹಕಾರಿಯಾಗಿರುವ ಕಾರಣ ಪ್ರಸಿದ್ಧ್ ಆಡುವ ಬಳಗದಲ್ಲೂ ಕಾಣಿಸಿಕೊಳ್ಳಬಹುದು. ಏಕೆಂದರೆ 18 ಸದಸ್ಯರ ಬಳಗದಲ್ಲಿ ಪ್ರಮುಖ ವೇಗಿ ಮೊಹಮ್ಮದ್ ಶಮಿ ಸ್ಥಾನ ಪಡೆದಿಲ್ಲ. ಹೀಗಾಗಿ ಕನ್ನಡಿಗನಿಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಕರುಣ್ ನಾಯರ್: 2017 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟೆಸ್ಟ್ ಪಂದ್ಯವಾಡಿದ್ದ ಕರುಣ್ ನಾಯರ್ ಇದೀಗ 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಕದ ತಟ್ಟಿದ್ದ ಕರುಣ್ ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿದೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್.