Updated on: Feb 12, 2023 | 4:39 PM
ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ನಾಗ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ಗಳು ಮೋಡಿ ಮಾಡಿದ್ದರು. ಪರಿಣಾಮ ಆಸೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 177 ರನ್ಗಳಿಗೆ ಆಲೌಟ್ ಆದರೆ, 2ನೇ ಇನಿಂಗ್ಸ್ ಅನ್ನು ಕೇವಲ 91 ರನ್ಗಳಿಗೆ ಅಂತ್ಯಗೊಳಿಸಿತ್ತು. ಇತ್ತ ಮೊದಲ ಇನಿಂಗ್ಸ್ನಲ್ಲಿ 400 ರನ್ ಪೇರಿಸಿದ್ದ ಭಾರತ ತಂಡವು ಇನಿಂಗ್ಸ್ ಹಾಗೂ 132 ರನ್ಗಳ ಭರ್ಜರಿ ಜಯ ಸಾಧಿಸಿತು.
ಇದೀಗ ಉಭಯ ತಂಡಗಳು 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಭಾರತ vs ಆಸ್ಟ್ರೇಲಿಯಾ ಎನ್ನುವುದಕ್ಕಿಂತ, ರವಿಚಂದ್ರನ್ ಅಶ್ವಿನ್ vs ನಾಥನ್ ಲಿಯಾನ್ ಆಗಿ ಮಾರ್ಪಡಲಿದೆ. ಏಕೆಂದರೆ ಪ್ರಸ್ತುತ ಟೆಸ್ಟ್ ಅಂಗಳದ ಅತ್ಯುತ್ತಮ ಸ್ಪಿನ್ನರ್ಗಳು ಎನಿಸಿಕೊಂಡಿರುವ ಈ ಇಬ್ಬರು ಹಲವು ಮೈಲುಗಲ್ಲುಗಳ ಸಮೀಪದಲ್ಲಿದ್ದಾರೆ. ಹೀಗಾಗಿ ಸಾಧಕರ ಪಟ್ಟಿಗೆ ಯಾರು ಬೇಗ ಸೇರ್ಪಡೆಯಾಗಲಿದ್ದಾರೆ ಎಂಬುದು 2ನೇ ಟೆಸ್ಟ್ ಪಂದ್ಯದಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.
ಅಂದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಳಲ್ಲಿ 100 ಕ್ಕೂ ಅಧಿಕ ವಿಕೆಟ್ ಪಡೆದ ಏಕೈಕ ಬೌಲರ್ ಆಗಿ ಅನಿಲ್ ಕುಂಬ್ಳೆ (111) ಅಗ್ರಸ್ಥಾನದಲ್ಲಿದ್ದಾರೆ. ಇದೀಗ 100 ವಿಕೆಟ್ ಸರದಾರರ ಪಟ್ಟಿಗೆ ಸೇರ್ಪಡೆಯಾಗಲು ಅಶ್ವಿನ್ಗೆ (97 ವಿಕೆಟ್) ಕೇವಲ 3 ವಿಕೆಟ್ಗಳ ಅಗತ್ಯವಿದೆ.
ಅತ್ತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 100 ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಳ್ಳಲು ನಾಥನ್ ಲಿಯಾನ್ಗೆ 5 ವಿಕೆಟ್ಗಳ ಅಗತ್ಯತೆಯಿದೆ. ಅಂದರೆ 2ನೇ ಟೆಸ್ಟ್ನಲ್ಲಿ ಅಶ್ವಿನ್ 3 ವಿಕೆಟ್ ಪಡೆದರೆ ಅಥವಾ ನಾಥನ್ ಲಿಯಾನ್ 5 ವಿಕೆಟ್ ಪಡೆದರೆ BGT ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಇಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲೂ ಉಭಯ ತಂಡಗಳ ಹಿರಿಯ ಸ್ಪಿನ್ನರ್ಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪಟ್ಟಿಯಲ್ಲಿ ನಾಥನ್ ಲಿಯಾನ್ 8ನೇ ಸ್ಥಾನದಲ್ಲಿದ್ದರೆ, ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ. ಆದರೆ 2ನೇ ಟೆಸ್ಟ್ ಪಂದ್ಯದ ಮೂಲಕ ಆಸೀಸ್ ಸ್ಪಿನ್ನರ್ ಅನ್ನು ಹಿಂದಿಕ್ಕುವ ಅವಕಾಶ ಅಶ್ವಿನ್ ಮುಂದಿದೆ.
ಆಸ್ಟ್ರೇಲಿಯಾ ಪರ 116 ಟೆಸ್ಟ್ ಪಂದ್ಯಗಳನ್ನಾಡಿರುವ ನಾಥನ್ ಲಿಯಾನ್ ಒಟ್ಟು 461 ವಿಕೆಟ್ ಕಬಳಿಸಿ, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
ಇನ್ನು ಟೀಮ್ ಇಂಡಿಯಾ ಪರ 89 ಟೆಸ್ಟ್ ಪಂದ್ಯಗಳಿಂದ 457 ವಿಕೆಟ್ ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅಂದರೆ 2ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 5 ವಿಕೆಟ್ ಪಡೆದರೆ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಲಿದ್ದಾರೆ. ಅತ್ತ ಅಶ್ವಿನ್ಗಿಂತ ಹೆಚ್ಚಿನ ವಿಕೆಟ್ ಪಡೆದು 8ನೇ ಸ್ಥಾನವನ್ನು ಕಾಯ್ದುಕೊಳ್ಳಲು ನಾಥನ್ ಲಿಯಾನ್ ಕೂಡ ಪೈಪೋಟಿ ನಡೆಸಲಿದ್ದಾರೆ.
ಒಟ್ಟಿನಲ್ಲಿ ದೆಹಲಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಸ್ಪಿನ್ನರ್ಗಳ ನಡುವೆ ಪೈಪೋಟಿ ಕಂಡು ಬರುವುದಂತು ದಿಟ. ಇದರಲ್ಲಿ ಅಶ್ವಿನ್ ಮೇಲುಗೈ ಸಾಧಿಸುತ್ತಾ ಅಥವಾ ನಾಥನ್ ಲಿಯಾನ್ ಹೊಸ ಸಾಧನೆ ಮಾಡುತ್ತಾರಾ ಕಾದು ನೋಡಬೇಕಿದೆ.
Published On - 3:57 pm, Sun, 12 February 23