ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾವನ್ನು ಕೇವಲ 109 ರನ್ಗಳಿಗೆ ಆಲೌಟ್ ಮಾಡಿದ್ದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ ಅನ್ನು 197 ರನ್ಗಳಿಗೆ ಅಂತ್ಯಗೊಳಿಸಿದೆ.
ಇತ್ತ ಬೃಹತ್ ಮೊತ್ತದತ್ತ ನಿರೀಕ್ಷೆಯೊಂದಿಗೆ 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮುಳುವಾಗಿದ್ದು ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ವೇಗಿ ಉಮೇಶ್ ಯಾದವ್. ಮೊದಲ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ 2ನೇ ದಿನದಾಟದ ಆರಂಭದಲ್ಲೇ ಅಶ್ವಿನ್ ಶಾಕ್ ನೀಡಿದ್ದರು.
ಉತ್ತಮ ಸ್ಪಿನ್ ಮೋಡಿ ಮಾಡಿದ ಅಶ್ವಿನ್ 44 ರನ್ಗೆ 3 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಬೇಗನೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶೇಷ ಎಂದರೆ ಈ ಮೂರು ವಿಕೆಟ್ಗಳೊಂದಿಗೆ ರವಿ ಅಶ್ವಿನ್ ವಿಶೇಷ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು. ಅದು ಕೂಡ ಕಪಿಲ್ ದೇವ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದೇ ಇಲ್ಲಿ ವಿಶೇಷ.
ಹೌದು, ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ಅಶ್ವಿನ್ ಮೂರನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ಸ್ಥಾನದಲ್ಲಿ ಕಪಿಲ್ ದೇವ್ ಇದ್ದರು.
ಭಾರತದ ಪರ 356 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಪಿಲ್ ದೇವ್ ಒಟ್ಟು 687 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಅತ್ಯಧಿಕ ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು.
ಇದೀಗ ರವಿಚಂದ್ರನ್ ಅಶ್ವಿನ್ 269* ನೇ ಅಂತಾರಾಷ್ಟ್ರೀಯ ಪಂದ್ಯದಿಂದ ಒಟ್ಟು 689* ವಿಕೆಟ್ಗಳನ್ನು ಉರುಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಭಾರತದ ಪರ 401 ಪಂದ್ಯಗಳನ್ನಾಡಿದ್ದ ಕುಂಬ್ಳೆ ಒಟ್ಟು 953 ವಿಕೆಟ್ ಕಬಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಹರ್ಭಜನ್ ಸಿಂಗ್ ಇದ್ದು, 365 ಅಂತಾರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 707 ವಿಕೆಟ್ ಪಡೆದಿದ್ದಾರೆ.
ಇದೀಗ ಮೂರನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ಗೆ ಹರ್ಭಜನ್ ಸಿಂಗ್ ದಾಖಲೆ ಮುರಿಯಲು ಕೇವಲ 18 ವಿಕೆಟ್ಗಳ ಅವಶ್ಯಕತೆಯಿದೆ. ಹೀಗಾಗಿ ಮುಂಬರುವ ಟೆಸ್ಟ್ ಸರಣಿಗಳ ಮೂಲಕ ಅಶ್ವಿನ್ ದ್ವಿತೀಯ ಸ್ಥಾನಕ್ಕೇರುವ ವಿಶ್ವಾಸದಲ್ಲಿದ್ದಾರೆ ಅಶ್ವಿನ್.