ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ಗಾಗಿ ಟೀಂ ಇಂಡಿಯಾ ಮೆಲ್ಬೋರ್ನ್ ತಲುಪಿದ್ದು, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಿದ್ಧತೆಯನ್ನೂ ಆರಂಭಿಸಿದೆ. ಆದರೆ ಈ ಮಧ್ಯೆ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಿವೆ.
ವಾಸ್ತವವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭದಿಂದಲೂ ಟೀಂ ಇಂಡಿಯಾ ಆಟಗಾರರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಲ್ಲೇ ಬಂದಿರುವ ಆಸ್ಟ್ರೇಲಿಯದ ಮಾಧ್ಯಮಗಳು ಇದೀಗ ರವೀಂದ್ರ ಜಡೇಜಾರನ್ನು ಗುರಿಯಾಗಿಸಿಕೊಂಡಿವೆ. ಮೊದಲು ವಿರಾಟ್ ಕೊಹ್ಲಿ ವಿರುದ್ಧ ಆರೋಪ ಹೊರಿಸಿದ್ದ ಈ ಮಾಧ್ಯಮಗಳು ಈಗ ಜಡೇಜಾರನ್ನು ಟಾರ್ಗೆಟ್ ಮಾಡಿವೆ.
ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ರವೀಂದ್ರ ಜಡೇಜಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆಸೀಸ್ ಮಾಧ್ಯಮ ಚಾನೆಲ್ 7 ಪ್ರಕಾರ, ಈ ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾದ ಪತ್ರಕರ್ತರು ಕೇಳಿದ ಯಾವುದೇ ಪ್ರಶ್ನೆಗೆ ಜಡೇಜಾ ಉತ್ತರಿಸಿಲ್ಲ. ಅಲ್ಲದೆ ಜಡೇಜಾ ಅವರು ಭಾರತೀಯ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಹಿಂದಿಯಲ್ಲಿ ಉತ್ತರಿಸಿದ್ದಾರೆ ಎಂದು ಆರೋಪ ಹೊರಿಸಿವೆ.
ಆದರೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಪತ್ರಕರ್ತರು ಆಸೀಸ್ ಮಾಧ್ಯಮಗಳ ಆರೋಪವನ್ನು ತಿರಸ್ಕರಿಸಿದ್ದಾರೆ. ಈ ಪತ್ರಿಕಾಗೋಷ್ಠಿಗೆ ಭಾರತೀಯ ಮಾಧ್ಯಮಗಳನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಷ್ಟೇ ಅಲ್ಲ, ಜಡೇಜಾ ಸಾಮಾನ್ಯವಾಗಿ ಹಿಂದಿಯಲ್ಲಿ ಆರಾಮದಾಯಕವಾಗಿ ಉತ್ತರಿಸುತ್ತಾರೆ. ಇದರಿಂದಾಗಿ ಭಾರತೀಯ ಮಾಧ್ಯಮಗಳು ಅವರಿಗೆ ಹಿಂದಿಯಲ್ಲಿ ಮಾತ್ರ ಪ್ರಶ್ನೆಗಳನ್ನು ಕೇಳಿದ್ದವು. ಅಂತಹ ಪರಿಸ್ಥಿತಿಯಲ್ಲಿ ಜಡೇಜಾ ಕೂಡ ಹಿಂದಿಯಲ್ಲಿ ಉತ್ತರಿಸಿದರು ಎಂದಿದ್ದಾರೆ.
ವಾಸ್ತವವಾಗಿ ಜಡೇಜಾಗೂ ಮುನ್ನ ಆಸೀಸ್ ಮಾಧ್ಯಮಳು ಕೊಹ್ಲಿ ವಿರುದ್ಧ ಹರಿಹಾಯ್ದಿದ್ದವು. ವಿರಾಟ್ ಕೊಹ್ಲಿ ಮಹಿಳಾ ಪತ್ರಕರ್ತೆಯನ್ನೇ ನಿಂಧಿಸಿದ್ದಾರೆ ಎಂದು ಆರೋಪಿಸಿದ್ದವು. ಅಷ್ಟಕ್ಕೂ ನಡೆದಿದ್ದೇನೆಂದರೆ,, ನಾಲ್ಕನೇ ಟೆಸ್ಟ್‌ಗಾಗಿ ಕೊಹ್ಲಿ ಮೆಲ್ಬೋರ್ನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ವೇಳೆ ಆಸೀಸ್ ಮಾಧ್ಯಮಗಳು ಕೊಹ್ಲಿಯ ಅನುಮತಿಯಿಲ್ಲದೆ ಅವರ ಮಕ್ಕಳ ಫೋಟೋ ತೆಗೆಯಲು ಮುಂದಾಗಿದ್ದವು.
ಇದನ್ನು ಗಮನಿಸಿದ್ದ ಕೊಹ್ಲಿ ತಮ್ಮ ಮಕ್ಕಳ ಚಿತ್ರಗಳನ್ನು ಕ್ಲಿಕ್ಕಿಸದಂತೆ ಆಸೀಸ್ ಮಾಧ್ಯಮಗಳನ್ನು ತಡೆದರು. ಹಾಗೆಯೇ ನನ್ನನ್ನು ಕೇಳದೆ ನೀವು ನನ್ನ ಮಕ್ಕಳ ಫೋಟೋಗಳನ್ನು ತೆಗೆದುಕೊಳ್ಳುವಂತಿಲ್ಲ. ನಮ್ಮ ಖಾಸಗೀತನಕ್ಕೆ ಗೌರವ ಕೊಡಿ ಎಂದು ಮನವಿ ಮಾಡಿದ್ದರು. ಆದರೆ, ಆಸೀಸ್ ಮಾಧ್ಯಮಗಳು ಮಾತ್ರ ಕೊಹ್ಲಿ ಆರೋಪವನ್ನು ತಳ್ಳಿ ಹಾಕಿದ್ದವು. ನಾವು ಕೊಹ್ಲಿ ಮಕ್ಕಳ ಫೋಟೋವನ್ನು ತೆಗೆಯಲು ಪ್ರಯತ್ನಿಸಲಿಲ್ಲ ಎಂದಿದ್ದವು.