ಟೀಮ್ ಇಂಡಿಯಾದ 11 ಆಟಗಾರರು ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ದಿನೇಶ್ ಕಾರ್ತಿಕ್ ಅವರಿಂದ ಪ್ರಾರಂಭವಾದ ನಿವೃತ್ತಿಯ ಪರ್ವವು ಕೊನೆಗೊಂಡಿರುವುದು ರವಿಚಂದ್ರನ್ ಅಶ್ವಿನ್ ಅವರ ವಿದಾಯದೊಂದಿಗೆ ಎಂಬುದು ವಿಶೇಷ. ಹಾಗಿದ್ರೆ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಭಾರತೀಯ ಆಟಗಾರರು ಯಾರೆಲ್ಲಾ ಎಂದು ನೋಡೋಣ...
ದಿನೇಶ್ ಕಾರ್ತಿಕ್: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. 2004 ರಿಂದ 2022 ರವರೆಗೆ ಟೀಮ್ ಇಂಡಿಯಾ ಪರ 179 ಪಂದ್ಯಗಳನ್ನಾಡಿರುವ ಡಿಕೆ ಒಟ್ಟು 3463 ರನ್ ಕಲೆಹಾಕಿದ್ದಾರೆ.
ಶಿಖರ್ ಧವನ್: ಟೀಮ್ ಇಂಡಿಯಾದ ಎಡಗೈ ದಾಂಡಿಗ ಶಿಖರ್ ಧವನ್ ಈ ವರ್ಷದ ಮಧ್ಯ ಭಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. 2010 ರಿಂದ 2022ರವರೆಗೆ ಟೀಮ್ ಇಂಡಿಯಾ ಪರ 269 ಪಂದ್ಯಗಳನ್ನಾಡಿರುವ ಧವನ್ ಒಟ್ಟು 10867 ರನ್ ಕಲೆಹಾಕಿದ್ದಾರೆ.
ವೃದ್ಧಿಮಾನ್ ಸಾಹ: ಭಾರತ ತಂಡದ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹ ಕೂಡ ಇದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. 2010 ರಿಂದ 2021ರ ನಡುವೆ ಭಾರತದ ಪರ 49 ಪಂದ್ಯಗಳನ್ನಾಡಿರುವ ಸಾಹ ಒಟ್ಟು 1394 ರನ್ಗಳಿಸಿದ್ದಾರೆ.
ಮನೋಜ್ ತಿವಾರಿ: ಟೀಮ್ ಇಂಡಿಯಾ ಆಟಗಾರ ಮನೋಜ್ ತಿವಾರಿ ಕೂಡ ಇದೇ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಭಾರತದ ಪರ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ತಿವಾರಿ 302 ರನ್ಗಳಿಸಿದ್ದಾರೆ.
ವರುಣ್ ಆರೋನ್: ಭಾರತದ ಪರ 9 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನಾಡಿರುವ ವರುಣ್ ಆರೋನ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಟೀಮ್ ಇಂಡಿಯಾ ಪರ 18 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ವರುಣ್ ಒಟ್ಟು 29 ವಿಕೆಟ್ ಕಬಳಿಸಿದ್ದಾರೆ.
ಸೌರಭ್ ತಿವಾರಿ: ಟೀಮ್ ಇಂಡಿಯಾ ಪರ ಮೂರು ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಸೌರವ್ ತಿವಾರಿ ಕೂಡ ಇದೇ ವರ್ಷ ಮೂರು ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಭಾರತದ ಪರ 2 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ತಿವಾರಿ 49 ರನ್ ಕಲೆಹಾಕಿದ್ದಾರೆ.
ಕೇದಾರ್ ಜಾಧವ್: ಟೀಮ್ ಇಂಡಿಯಾ ಪರ ಆಲ್ರೌಂಡರ್ ಆಗಿ 82 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಕೇದಾರ್ ಜಾಧವ್ ಕೂಡ ಇದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಕೊನೆಗೊಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 58 ಇನಿಂಗ್ಸ್ ಆಡಿರುವ ಅವರು ಒಟ್ಟು 1511 ರನ್ ಕಲೆಹಾಕಿದ್ದಾರೆ.
ಬರೀಂದರ್ ಸ್ರಾನ್: ಭಾರತದ ಪರ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಎಡಗೈ ವೇಗಿ ಬರೀಂದರ್ ಸ್ರಾನ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಪರ ಆಡಿದ ಎಂಟು ಪಂದ್ಯಗಳಿಂದ ಸ್ರಾನ್ ಒಟ್ಟು 13 ವಿಕೆಟ್ ಕಬಳಿಸಿದ್ದಾರೆ.
ಸಿದ್ಧಾರ್ಥ್ ಕೌಲ್: ಭಾರತ ತಂಡದಲ್ಲಿದ್ದ ಬಲಗೈ ವೇಗಿ ಸಿದ್ಧಾರ್ಥ್ ಕೌಲ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸಿದ್ಧಾರ್ಥ್ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ.
ಧವಳ್ ಕುಲ್ಕರ್ಣಿ: ಟೀಮ್ ಇಂಡಿಯಾ ವೇಗಿ ಧವಳ್ ಕುಲ್ಕರ್ಣಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಟೀಮ್ ಇಂಡಿಯಾ ಪರ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಧವಳ್ ಒಟ್ಟು 22 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. 2010 ರಿಂದ 2024 ರವರೆಗೆ ಭಾರತದ ಪರ 379 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ ಒಟ್ಟು 765 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ 2ನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಈ ವರ್ಷ ನಡೆದ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಈ ಮೂವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆದಿದ್ದಾರೆ.
Published On - 10:53 am, Sat, 21 December 24