
ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಸ್ತುತ ಆತಿಥೇಯ ತಂಡ ಮೇಲುಗೈ ಸಾಧಿಸಿದಂತೆ ಕಾಣುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ವೇಗಿಗಳು ಟೀಂ ಇಂಡಿಯಾವನ್ನು ಕಾಡಿದರೆ, ಇತ್ತ ಆಂಗ್ಲ ಬ್ಯಾಟರ್ಗಳು ಭಾರತದ ಬೌಲರ್ಗಳ ಎದುರು ಸರಾಗವಾಗಿ ರನ್ ಕಲೆಹಾಕುತ್ತಿದ್ದಾರೆ. ಭಾರತದ ಅನಾನುಭವಿ ಬೌಲಿಂಗ್ ಇಂಗ್ಲೆಂಡ್ಗೆ ವರದಾನವಾಗಿದೆ.

ವಾಸ್ತವವಾಗಿ ಓವಲ್‌ನಲ್ಲಿ ನಡೆಯುತ್ತಿರುವ ಈ ಅಂತಿಮ ಟೆಸ್ಟ್ ಗೆಲ್ಲುವುದು ಭಾರತ ತಂಡಕ್ಕೆ ಅತ್ಯವಶ್ಯಕವಾಗಿದೆ. ಏಕೆಂದರೆ ಈ ಪಂದ್ಯವನ್ನು ಸೋತರೆ ಭಾರತ ಸರಣಿ ಕಳೆದುಕೊಳ್ಳಲಾಗಿದೆ. ಹೀಗಾಗಿ ಈ ಪಂದ್ಯವನ್ನು ಗಿಲ್ ಪಡೆ ಗೆಲ್ಲಲೇಬೇಕಾಗಿದೆ. ಆದಾಗ್ಯೂ ಈ ನಿರ್ಣಯಕ ಪಂದ್ಯದಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆಡುತ್ತಿಲ್ಲ ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಈ ನಡುವೆ ಜಸ್ಪ್ರೀತ್ ಬುಮ್ರಾ ಬಗ್ಗೆ ಬಿಸಿಸಿಐ ಮಹತ್ವದ ಮಾಹಿತಿ ನೀಡಿದ್ದು, ಓವಲ್ ಟೆಸ್ಟ್‌ನಲ್ಲಿ ಪ್ಲೇಯಿಂಗ್ 11 ಭಾಗವಾಗಿರದ ಬುಮ್ರಾರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಬುಮ್ರಾ ಅವರ ಕೆಲಸದ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದೆ.

ಈ ಸರಣಿಯಲ್ಲಿ ಬುಮ್ರಾ ಒಟ್ಟು ಮೂರು ಟೆಸ್ಟ್ ಪಂದ್ಯಗಳನ್ನಾಡಿ 14 ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ, ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಅವರ ಬೌಲಿಂಗ್ ವೇಗ ಕಡಿಮೆಯಾಯಿತು. ಇದರಿಂದ ವೈದ್ಯಕೀಯ ತಂಡವು ಬುಮ್ರಾ ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿತು.

ಈ ಸರಣಿಗೂ ಮುನ್ನ ಬುಮ್ರಾ ಐದು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡುತ್ತಾರೆ ಎಂದು ನಿರ್ಧರಿಸಲಾಗಿತ್ತು. ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಬಹಳ ವರ್ಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿ ಬುಮ್ರಾ ವಿಚಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಅವರ ಬದಲಿಗೆ ಆಕಾಶ್ ದೀಪ್ ಅವರಿಗೆ ಅವಕಾಶ ನೀಡಲಾಗಿದೆ.