
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಿಂದ ಆರಂಭವಾಗುತ್ತಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾ ಕೂಡ ಈ ವರ್ಷವನ್ನು ಆರಂಭಿಸುತ್ತಿದೆ. ಈ ಸರಣಿಯ ಮೇಲೆ ಎಲ್ಲರ ಕಣ್ಣುಗಳು ಟೀಂ ಇಂಡಿಯಾದ ಇಬ್ಬರು ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೇಲಿರಲಿದೆ.

ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕ ಬಾರಿಸಿದ್ದ, ಆ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲೂ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಅದಕ್ಕೆ ಕಾರಣ ಪ್ರಸ್ತುತ ಕೊಹ್ಲಿ ಇರುವ ಫಾರ್ಮ್. ಕಳೆದ ಐದು ಇನ್ನಿಂಗ್ಸ್ಗಳಲ್ಲಿ ಕೊಹ್ಲಿ 3 ಶತಕ ಹಾಗೂ 2 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಅದೇ ಫಾರ್ಮ್ ಮುಂದುವರೆಸುವ ಇರಾದೆಯಲ್ಲಿ ಕೊಹ್ಲಿ ಇದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದರೆ, ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಳ್ಳಲಿದ್ದಾರೆ. ವಾಸ್ತವವಾಗಿ ಕಿವೀಸ್ ವಿರುದ್ಧ ಅತ್ಯಧಿಕ ಏಕದಿನ ಶತಕ ಸಿಡಿಸಿದವರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

ಈ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಒಂದೇ ಒಂದು ಶತಕ ಸಿಡಿಸಿದರೆ, ನ್ಯೂಜಿಲೆಂಡ್ ತಂಡದ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮಾಜಿ ದಿಗ್ಗಜ ವೀರೇಂದ್ರ ಸೆಹ್ವಾಗ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಪ್ರಸ್ತುತ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಈ ಮೂವರು ಆಟಗಾರರು (ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಮತ್ತು ವೀರೇಂದ್ರ ಸೆಹ್ವಾಗ್) ಜಂಟಿಯಾಗಿ ಹೊಂದಿದ್ದಾರೆ. ಈ ಮೂವರು ತಲಾ ಆರು ಬಾರಿ ಈ ಸಾಧನೆ ಮಾಡಿದ್ದಾರೆ. ಇದೀಬ ಕೊಹ್ಲಿ ಶತಕ ಸಿಡಿಸಿದರೆ, ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವುದಲ್ಲದೆ, ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.