
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನಾಲ್ಕನೇ ಪಂದ್ಯ ಡಿಸೆಂಬರ್ 17 ರಂದು ನಡೆಯಲಿದೆ. ಈಗಾಗಲೇ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿರುವ ಟೀಂ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಘಾತ ಎದುರಾಗಿದೆ.

ವಾಸ್ತವವಾಗಿ ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಹೊರಗುಳಿದಿದ್ದಾರೆ. ಪಟೇಲ್ ಅವರ ಸ್ಥಿತಿಯ ಕುರಿತು ಮಹತ್ವದ ಮಾಹಿತಿಯನ್ನು ಬಿಸಿಸಿಐ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಅವರ ಬದಲಿ ಆಟಗಾರನನ್ನು ಘೋಷಿಸಿದೆ.

ಅಕ್ಷರ್ ಪಟೇಲ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಮೂರನೇ ಟಿ20 ಪಂದ್ಯಕ್ಕೂ ಮುನ್ನ ಅನಾರೋಗ್ಯಕ್ಕೆ ಒಳಗಾಗಿದ್ದ ಅಕ್ಷರ್ ಪಟೇಲ್ ಇನ್ನು ಚೇತರಿಸಿಕೊಂಡಿಲ್ಲ. ಪ್ರಸ್ತುತ ಅವರು ತಂಡದೊಂದಿಗೆ ಇದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಆದಾಗ್ಯೂ ಅನಾರೋಗ್ಯದ ಕಾರಣ ಅವರು ಸರಣಿಯ ಉಳಿದ ಪಂದ್ಯದಿಂದ ಹೊರಗುಳಿದಿದ್ದಾರೆ.

ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ, ಆಯ್ಕೆ ಸಮಿತಿಯು ಬಂಗಾಳದ ಸ್ಪಿನ್ನಿಂಗ್ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಶಹಬಾಜ್ ಈಗ ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯುವ ಪಂದ್ಯಗಳಿಗೆ ಆಯ್ಕೆ ಲಭ್ಯವಿರುತ್ತಾರೆ. ಆದಾಗ್ಯೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ.

ಮತ್ತೊಂದೆಡೆ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಸರಣಿಯ ಮೂರನೇ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ. ಅವರು ಇದ್ದಕ್ಕಿದ್ದಂತೆ ತವರಿಗೆ ಮರಳಿದ್ದರು. ಆದಾಗ್ಯೂ, ಕೊನೆಯ ಎರಡು ಪಂದ್ಯಗಳಿಗೆ ಅವರು ತಂಡದಲ್ಲಿದ್ದಾರೆ. ಇದರರ್ಥ ಜಸ್ಪ್ರೀತ್ ಬುಮ್ರಾ ಕೊನೆಯ ಎರಡು ಪಂದ್ಯಗಳಿಗೆ ಲಭ್ಯರಿರಲಿದ್ದು, ಶೀಘ್ರದಲ್ಲೇ ತಂಡವನ್ನು ಸೇರಬಹುದು.

ಕೊನೆಯ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್.