ಟೀಮ್ ಇಂಡಿಯಾಗೆ ಅನುಭವಿ ಆಲ್ ರೌಂಡರ್ ಎಂಟ್ರಿ
India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ೨೦ ಸರಣಿಯ ಮೊದಲ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ದಾಖಲಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ತಂಡವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
Updated on: Dec 16, 2025 | 7:53 AM

ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಿನ ನಾಲ್ಕನೇ ಟಿ೨೦ ಪಂದ್ಯ ನಾಳೆ (ಡಿ.17) ನಡೆಯಲಿದೆ. ಲಕ್ನೋ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗಿದೆ.

ಕಟಕ್ ಹಾಗೂ ಮುಲ್ಲನ್ ಪುರ್ ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಆಲ್ ರೌಂಡರ್ ಅಕ್ಷರ್ ಪಟೇಲ್ ತಂಡದಿಂದ ಹೊರಗುಳಿದಿದ್ದಾರೆ. ಅನಾರೋಗ್ಯದ ಕಾರಣ ಅಕ್ಷರ್ ಕೊನೆಯ ಎರಡು ಮ್ಯಾಚ್ ಗಳಿಗೆ ಅಲಭ್ಯರಾಗಿದ್ದಾರೆ.

ಇತ್ತ ಅಕ್ಷರ್ ಪಟೇಲ್ ಹೊರಬೀಳುತ್ತಿದ್ದಂತೆ ಆಯ್ಕೆ ಸಮಿತಿಯು ಬಂಗಾಳದ ಸ್ಪಿನ್ ಆಲ್ ರೌಂಡರ್ ಶಹಬಾಝ್ ಅಹ್ಮದ್ ಅವರನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅದರಂತೆ ಇದೀಗ ಲಕ್ನೋನಲ್ಲಿ ಶಹಬಾಝ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ.

ಶಹಬಾಝ್ ಅಹ್ಮದ್ ಈ ಹಿಂದೆ ಟೀಮ್ ಇಂಡಿಯಾ ಪರ 2 ಟಿ೨೦ ಹಾಗೂ 3 ಏಕದಿನ ಪಂದ್ಯಗಳನ್ನಾಡಿದ್ದರು. ಈ ವೇಳೆ ಒಟ್ಟು 5 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ 112 ಟಿ೨೦ ಪಂದ್ಯಗಳನ್ನಾಡಿದ ಅನುಭವವನ್ನು ಸಹ ಹೊಂದಿದ್ದಾರೆ. ಹೀಗಾಗಿ ಅಕ್ಷರ್ ಪಟೇಲ್ ಬದಲಿಗೆ ಶಹಬಾಝ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆಮ ಅದರಂತೆ ಇದೀಗ 2 ವರ್ಷಗಳ ಬಳಿಕ ಮತ್ತೊಮ್ಮೆ ಶಹಬಾಝ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಹಬಾಝ್ ಅಹ್ಮದ್.
