
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಳ ಟೆಸ್ಟ್ ಸರಣಿ ಅತ್ಯಂತ ರೋಮಾಂಚಕಾರಿ ರೀತಿಯಲ್ಲಿ ಕೊನೆಗೊಂಡಿದೆ. ಜೂನ್ 20 ರಂದು ಲೀಡ್ಸ್‌ನಲ್ಲಿ ಪ್ರಾರಂಭವಾದ ಈ ಟೆಸ್ಟ್ ಸರಣಿಯು ಆಗಸ್ಟ್ 4 ರಂದು ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನ ಕೊನೆಯ ಇನ್ನಿಂಗ್ಸ್‌ನೊಂದಿಗೆ ಕೊನೆಗೊಂಡಿತು. ಟೀಂ ಇಂಡಿಯಾ ಈ ಕೊನೆಯ ಟೆಸ್ಟ್ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಳ್ಳು ಮೂಲಕ ಸರಣಿಯನ್ನು ಡ್ರಾದಲ್ಲಿ ಕೊನೆಗೊಳಿಸಿತು.

ಓವಲ್ ಟೆಸ್ಟ್‌ನ ಫಲಿತಾಂಶವು ಸರಣಿಯ ಸ್ಕೋರ್‌ಲೈನ್‌ನ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲದೆ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ ಪಟ್ಟಿಯಲ್ಲಿಯೂ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ದೊಡ್ಡ ಜಿಗಿತವನ್ನು ಸಾಧಿಸಿದ್ದು, ಆತಿಥೇಯ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿದೆ.

ವಾಸ್ತವವಾಗಿ ಮ್ಯಾಂಚೆಸ್ಟರ್ನಲ್ಲಿ ನಡೆದ 4ನೇ ಟೆಸ್ಟ್ ನಂತರ, ಇಂಗ್ಲೆಂಡ್ WTC ಪಾಯಿಂಟ್ ಪಟ್ಟಿಯಲ್ಲಿ 26 ಅಂಕಗಳು ಮತ್ತು 54.17 ಗೆಲುವಿನ ಶೇಕಡಾವಾರುವಿನೊಂದಿಗೆ ಮೂರನೇ ಸ್ಥಾನದಲ್ಲಿತ್ತು. ಇತ್ತ ಟೀಂ ಇಂಡಿಯಾ 16 ಅಂಕಗಳು ಮತ್ತು 33.33 ಗೆಲುವಿನ ಶೇಕಡಾವಾರುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿತ್ತು.

ಇದೀಗ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲೂ ಬದಲಾವಣೆಗಳಾಗಿವೆ. ಐದನೇ ಟೆಸ್ಟ್‌ನಲ್ಲಿನ ಗೆಲುವಿನ ನಂತರ, ಟೀಂ ಇಂಡಿಯಾ 28 ಅಂಕಗಳು ಮತ್ತು 46.67 ಗೆಲುವಿನ ಶೇಕಡಾವಾರುವಿನೊಂದಿಗೆ ಮೂರನೇ ಸ್ಥಾನ್ಕಕೇರಿದರೆ, ಇತ್ತ ಇಂಗ್ಲೆಂಡ್ ಕೇವಲ 26 ಅಂಕಗಳು ಮತ್ತು 43.33 ಗೆಲುವಿನ ಶೇಕಡಾವಾರುವಿನೊಂದಿಗೆ ಕುಸಿದು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಪಾಯಿಂಟ್ ಟೇಬಲ್‌ನಲ್ಲಿರುವ ಉಳಿದ ತಂಡಗಳಿಗೆ ಸಂಬಂಧಿಸಿದಂತೆ, ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಇನ್ನೂ ಮೊದಲ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ಕಾಂಗರೂ ತಂಡ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಈ ಸೀಸನ್‌ನಲ್ಲಿ ಇನ್ನೂ ತಮ್ಮ ಅಭಿಯಾನವನ್ನು ಪ್ರಾರಂಭಿಸಿಲ್ಲ.

ಟೀಮ್ ಇಂಡಿಯಾ ಬಗ್ಗೆ ಹೇಳುವುದಾದರೆ, ಗಿಲ್ ಪಡೆ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ತವರು ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಈ 2 ಪಂದ್ಯಗಳ ಸರಣಿ ಎರಡು ತಿಂಗಳ ನಂತರ ಅಂದರೆ ಅಕ್ಟೋಬರ್ 2 ರಿಂದ ಆರಂಭವಾಗಲಿದೆ. ಇದರ ನಂತರ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಈ ಸರಣಿಯೂ ಭಾರತದ ನೆಲದಲ್ಲಿ ನಡೆಯಲಿದೆ. ಈ ಎರಡೂ ಸರಣಿಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸುವ ಅವಕಾಶವನ್ನು ಹೊಂದಿರುತ್ತದೆ. ಇಂಗ್ಲೆಂಡ್ ಬಗ್ಗೆ ಹೇಳುವುದಾದರೆ, ಆಂಗ್ಲ ಪಡೆ ಈಗ ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ನವೆಂಬರ್ 21 ರಿಂದ ಎರಡೂ ತಂಡಗಳ ನಡುವೆ 5ಪಂದ್ಯಗಳ ಆಶಸ್ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.