ಟಿ20 ವಿಶ್ವಕಪ್‌ಗೆ 17 ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ಒಟ್ಟು 8 ಆವೃತ್ತಿಗಳು ನಡೆದಿವೆ. ಇದೀಗ 9ನೇ ಆವೃತ್ತಿಯು ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ ನಡೆಯುತ್ತಿದೆ. 9 ನೇ ಆವೃತ್ತಿಯಲ್ಲಿ ಟೀಮ್ ಇಂಡಿಯಾದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ಇಂದು ನಡೆಯಲ್ಲಿದೆ. ಆದರೆ, ಅದಕ್ಕೂ ಮುನ್ನ ಪ್ರತಿ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯದ ಫಲಿತಾಂಶ ಏನಾಗಿತ್ತು ಎಂಬುದರ ಪೂರ್ಣ ವಿವರ ಇಲ್ಲಿದೆ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿ ನಡೆದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಅಂದಿನ ಹೊಸ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವಕಪ್ ಆಡಲು ಹೊರಟಿದ್ದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಸವಾಲನ್ನು ಎದುರಿಸಿತ್ತು. ಆದರೆ ಮಳೆಯಿಂದಾಗಿ ಈ ಪಂದ್ಯ ನಡೆಯಲಿಲ್ಲ.
ಟಿ20 ವಿಶ್ವಕಪ್‌ನ ಎರಡನೇ ಆವೃತ್ತಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಬಾಂಗ್ಲಾದೇಶ ವಿರುದ್ಧ ನಡೆದ ಟೀಂ ಇಂಡಿಯಾದ ಮೊದಲ ಪಂದ್ಯದಲ್ಲಿ ಭಾರತ 25 ರನ್‌ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಪ್ರಸ್ತುತ ಭಾರತ ತಂಡದಿಂದ ರೋಹಿತ್ ಶರ್ಮಾ ಮಾತ್ರ ಆಡುತ್ತಿದ್ದರು. ಪಂದ್ಯ ಆರಂಭಿಸಿದ ರೋಹಿತ್ 23 ಎಸೆತಗಳಲ್ಲಿ 36 ರನ್ ಬಾರಿಸಿದ್ದರು.
2010 ರಲ್ಲಿ ನಡೆದ ಟಿ20 ವಿಶ್ವಕಪ್‌ನ ಮೂರನೇ ಆವೃತ್ತಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿತ್ತು. ಅಂದು ಸಿ ಗುಂಪಿನಲ್ಲಿದ್ದ ಟೀಮ್ ಇಂಡಿಯಾ ತನ್ನ ನೆರೆಯ ಅಫ್ಘಾನಿಸ್ತಾನದೊಂದಿಗೆ ತನ್ನ ಮೊದಲ ಹಣಾಹಣಿ ನಡೆಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 115 ರನ್ ಕಲೆಹಾಕಿತ್ತು. ನಂತರ 116 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಇನ್ನೂ 31 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿತು.
2012ರಲ್ಲಿ ಶ್ರೀಲಂಕಾದಲ್ಲಿ ನಡೆದ ನಾಲ್ಕನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿಯೇ ಅಫ್ಘಾನಿಸ್ತಾನ ತಂಡವನ್ನು ಎದುರಿಸಿತ್ತು. ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 159 ರನ್ ಗಳಿಸಿತು. ಉತ್ತರವಾಗಿ ಅಫ್ಘಾನಿಸ್ತಾನ ತಂಡ ಕೇವಲ 136 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಂದ್ಯವನ್ನು ಭಾರತ 23 ರನ್‌ಗಳಿಂದ ಗೆದ್ದುಕೊಂಡಿತು ಮತ್ತು 39 ಎಸೆತಗಳಲ್ಲಿ 50 ರನ್ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯದ ಆಟಗಾರರಾಗಿ ಆಯ್ಕೆಯಾದರು.
2014 ರ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ನಡೆದಿತ್ತು. ಅಲ್ಲಿ ಭಾರತದ ಮೊದಲ ಪಂದ್ಯ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 130 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ 9 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರೆ, ಆರಂಭಿಕ ರೋಹಿತ್ ಶರ್ಮಾ 21 ಎಸೆತಗಳಲ್ಲಿ 24 ರನ್ ಬಾರಿಸಿದ್ದರು.
2016ರಲ್ಲಿ ಟಿ20 ವಿಶ್ವಕಪ್ ಭಾರತದಲ್ಲೇ ನಡೆದಿತ್ತು. ಇದು ಈ ಐಸಿಸಿ ಟೂರ್ನಿಯ ಆರನೇ ಆವೃತ್ತಿಯಾಗಿದ್ದು, ಇದರಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯ ನ್ಯೂಜಿಲೆಂಡ್ ವಿರುದ್ಧವಾಗಿತ್ತು. ಈ ಪಂದ್ಯದಲ್ಲಿ ಭಾರತ 47 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ನಾಗ್ಪುರ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಆಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 126 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡಕ್ಕೆ 79ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಇಬ್ಬರೂ ವಿಫಲರಾಗಿದ್ದರು. ಆರಂಭಿಕರಾದ ರೋಹಿತ್ ಕೇವಲ 5 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 23 ರನ್ ಗಳಿಸಿ ಔಟಾದರು.
2021 ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಿದ್ದವು. ಆದರೆ, 2014ರಲ್ಲಿ ಕಂಡ ಫಲಿತಾಂಶ ಇಲ್ಲಿ ಇರಲಿಲ್ಲ. ಈ ಬಾರಿ ಪಾಕಿಸ್ತಾನ ಭಾರತವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151 ರನ್ ಗಳಿಸಿದ್ದರೂ, ಆರಂಭಿಕ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ನಡುವೆ 152 ರನ್‌ಗಳ ಜೊತೆಯಾಟದ ಕಾರಣ ಪಾಕಿಸ್ತಾನ 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮಾತ್ರವಲ್ಲದೆ ಟಿ20 ವಿಶ್ವಕಪ್‌ನಲ್ಲೂ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಮೊದಲ ಸೋಲು. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 57 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
2022 ರಲ್ಲಿ, 8 ನೇ ಅಂದರೆ ಟಿ20 ವಿಶ್ವಕಪ್‌ನ ಹಿಂದಿನ ಆವೃತ್ತಿಯನ್ನು ಆಸ್ಟ್ರೇಲಿಯಾದ ನೆಲದಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯೂ ಟೀಂ ಇಂಡಿಯಾದ ಮೊದಲ ಹಣಾಹಣಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಇತ್ತು. ಮೆಲ್ಬೋರ್ನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದ್ದರು. ಪಂದ್ಯದಲ್ಲಿ ಮೊದಲು ಆಡಿದ ಪಾಕಿಸ್ತಾನ, ಭಾರತಕ್ಕೆ ಗೆಲ್ಲಲು 160 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ ಅವರ ಅಜೇಯ 82 ರನ್‌ಗಳ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಕಳೆದ 8 ಆವೃತ್ತಿಗಳ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಎರಡು ಬಾರಿ ಮಾತ್ರ ಸೋಲನುಭವಿಸಿದೆ. ಉಳಿದ 5 ಬಾರಿಯೂ ಗೆಲುವು ಸಾಧಿಸಿದೆ. ಆ 5 ಬಾರಿಯಂತೆ 9ನೇ ಆವೃತ್ತಿಯಲ್ಲೂ ಟೀಂ ಇಂಡಿಯಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯವನ್ನು ಗೆದ್ದು ಅಬ್ಬರದಿಂದಲೇ ಟೂರ್ನಿ ಆರಂಭಿಸುವ ಹುಮ್ಮಸ್ಸಿನಲ್ಲಿದೆ.
Published On - 4:03 pm, Wed, 5 June 24