
ಚುಟುಕು ಕ್ರಿಕೆಟ್ ಕದನಕ್ಕಾಗಿ ಆಸ್ಟ್ರೇಲಿಯಾದಲ್ಲಿ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 16 ರಿಂದ ಶುರುವಾಗಲಿರುವ 8ನೇ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ನೆಚ್ಚಿನ ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಒಂದು.

ಅಚ್ಚರಿಯ ಅಂಶ ಎಂದರೆ 2007 ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ಧ ಭಾರತ ತಂಡವು ಆ ಬಳಿಕ ಟ್ರೋಫಿ ಎತ್ತಿ ಹಿಡಿದಿಲ್ಲ ಎಂಬುದು. ಹಾಗಾಗಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಗಳು ಮುಗಿಲೆತ್ತರಕ್ಕೇರಿದೆ.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ, ಟೀಮ್ ಇಂಡಿಯಾ ಚೊಚ್ಚಲ ಟಿ20 ಪಂದ್ಯವಾಡಿದಾಗ ತಂಡದಲ್ಲಿ ಆಟಗಾರನೊಬ್ಬ ಈ ಬಾರಿ ಟಿ20 ವಿಶ್ವಕಪ್ ಆಡಲಿದ್ದಾರೆ. ಅಂದರೆ ಭಾರತ ತಂಡವು 2006 ರಲ್ಲಿ ಮೊದಲ ಟಿ20 ಪಂದ್ಯವಾಡಿತ್ತು.

ಸೌತ್ ಆಫ್ರಿಕಾ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು ವೀರೇಂದ್ರ ಸೆಹ್ವಾಗ್ ಎಂಬುದು ವಿಶೇಷ. ಅಂದರೆ ಭಾರತ ಟಿ20 ತಂಡದ ಮೊದಲ ನಾಯಕ ಸೆಹ್ವಾಗ್.

ಇನ್ನು ಅಂದು ತಂಡದಲ್ಲಿದ್ದ ದಿನೇಶ್ ಕಾರ್ತಿಕ್ ಮಾತ್ರ ಈಗ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ಉಳಿದೆಲ್ಲಾ ಆಟಗಾರರು ನಿವೃತ್ತರಾಗಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾದ ಮೊದಲ ಟಿ20 ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದರು ನೋಡೋಣ...

ವೀರೇಂದ್ರ ಸೆಹ್ವಾಗ್ (ನಾಯಕ)

ಸಚಿನ್ ತೆಂಡೂಲ್ಕರ್

ದಿನೇಶ್ ಮೊಂಗಿಯಾ

ಎಂಎಸ್ ಧೋನಿ

ದಿನೇಶ್ ಕಾರ್ತಿಕ್

ಸುರೇಶ್ ರೈನಾ

ಇರ್ಫಾನ್ ಪಠಾಣ್

ಎಸ್. ಶ್ರೀಶಾಂತ್

ಅಜಿತ್ ಅಗರ್ಕರ್

ಝಹೀರ್ ಖಾನ್

ಹರ್ಭಜನ್ ಸಿಂಗ್

2006, ಡಿಸೆಂಬರ್ 1 ರಂದು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಟಿ20 ಕ್ರಿಕೆಟ್ ಆರಂಭಿಸಿದ್ದ ಟೀಮ್ ಇಂಡಿಯಾ ಅಂದು ಜಯಭೇರಿ ಬಾರಿಸಿತ್ತು ಎಂಬುದು ಮತ್ತೊಂದು ವಿಶೇಷ. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತ್ತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಬಾರಿಸಿ ರೋಚಕ ಜಯ ಸಾಧಿಸಿತು. ಇದಾದ ಬಳಿಕ 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ಈಗ ಇತಿಹಾಸ.