
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ 246 ರನ್ಗಳಿಗೆ ಆಲೌಟ್ ಮಾಡಿತು. ಇದಾದ ಬಳಿಕ ಬ್ಯಾಟ್ ಬೀಸಿದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 436 ರನ್ ಕಲೆಹಾಕಿತು.

ಇನ್ನು 190 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 420 ರನ್ ಕಲೆಹಾಕಿ ಟೀಮ್ ಇಂಡಿಯಾ 231 ರನ್ಗಳ ಸುಲಭ ಗುರಿ ನೀಡಿದ್ದರು. ಆದರೆ ಈ ಗುರಿಯನ್ನು ಬೆನ್ನತ್ತವಲ್ಲಿ ವಿಫಲರಾಗಿರುವ ಭಾರತೀಯರು 28 ರನ್ಗಳಿಂದ ಸೋಲೊಪ್ಪಿಕೊಂಡಿದ್ದಾರೆ. ಆದರೆ ಇದು ಟೀಮ್ ಇಂಡಿಯಾ ಪಾಲಿಗೆ ಅಂತಿಂಥ ಸೋಲಲ್ಲ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಅಂದರೆ ಭಾರತ ತಂಡವು ತವರಿನಲ್ಲಿ ಇದುವರೆಗೆ 284 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 105 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ನಲ್ಲಿ 100+ ರನ್ಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯಗಳಲ್ಲಿ 70 ರಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, 35 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತು. ಅಂದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದ ಯಾವುದೇ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲಿನ ರುಚಿ ನೋಡಿರಲಿಲ್ಲ.

ಆದರೆ ಈ ಬಾರಿ ಭಾರತ ತಂಡವನ್ನು ಮಕಾಡೆ ಮಲಗಿಸುವಲ್ಲಿ ಬೆನ್ ಸ್ಟೋಕ್ಸ್ ಪಡೆ ಯಶಸ್ವಿಯಾಗಿದೆ. ಮೊದಲ ಇನಿಂಗ್ಸ್ನಲ್ಲಿ 190 ರನ್ಗಳ ಮುನ್ನಡೆ ಸಾಧಿಸಿದ್ದ ಟೀಮ್ ಇಂಡಿಯಾವನ್ನು 28 ರನ್ಗಳಿಂದ ಸೋಲಿಸಿ ಇಂಗ್ಲೆಂಡ್ ತಂಡ ಹೊಸ ಇತಿಹಾಸ ಬರೆದಿದೆ.

ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಹೈದರಾಬಾದ್ ರಾಜೀವ್ ಗಾಂಧಿ ಮೈದಾನದಲ್ಲಿ ಟೀಮ್ ಇಂಡಿಯಾ ಸೋತಿದೆ. ಹಾಗೆಯೇ 12 ವರ್ಷಗಳ ಬಳಿಕ ಭಾರತ ತಂಡವು ತವರಿನಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸುವಲ್ಲಿ ವಿಫಲವಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಇಂಗ್ಲೆಂಡ್ ವಿರುದ್ಧದ ಈ ಪರಾಜಯವನ್ನು ಟೀಮ್ ಇಂಡಿಯಾ ಪಾಲಿನ ಅತ್ಯಂತ ಹೀನಾಯ ಸೋಲು ಒಂದು ಪರಿಗಣಿಸಲಾಗಿದೆ.