IND vs AUS: ಅಧಿಕ ಶತಕ; ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ
Smriti Mandhana century: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ 3-0 ಅಂತರದಿಂದ ಸೋಲುಂಡಿದೆ. ಆದರೆ, ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಮೃತಿ ಮಂಧಾನ 105 ರನ್‌ಗಳ ಶತಕದ ಇನ್ನಿಂಗ್ಸ್ ಆಡಿದರು. ಇದು 2024ರಲ್ಲಿ ಅವರ ನಾಲ್ಕನೇ ಶತಕವಾಗಿದ್ದು, ಈ ಮೂಲಕ ಅವರು ಒಂದೇ ವರ್ಷದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಮಹಿಳಾ ಕ್ರಿಕೆಟ್ ಎಂಬ ದಾಖಲೆ ಬರೆದಿದ್ದಾರೆ.
1 / 6
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಸೋಲನುಭವಿಸಿದ ಭಾರತ ವನಿತಾ ಪಡೆ 3-0 ಅಂತರದಿಂದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಆದಾಗ್ಯೂ ತಂಡದ ಪರ 3ನೇ ಏಕದಿನ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕಾಂಗೂರಗಳ ನಾಡಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.
2 / 6
ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಏಕಪಕ್ಷೀಯವಾಗಿ ಸೋತಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲೂ ಭಾರಿ ಅಂತರದ ಸೋಲನುಭವಿಸಿತು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಆಸ್ಟ್ರೇಲಿಯ ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಉತ್ತರವಾಗಿ ಭಾರತದ ಪರ ಅಬ್ಬರಿಸಿದ ಸ್ಮೃತಿ ಮಂಧಾನ ಈ ವರ್ಷದ ನಾಲ್ಕನೇ ಶತಕ ದಾಖಲಿಸಿದರು.
3 / 6
ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 103 ಎಸೆತಗಳಲ್ಲಿ ಶತಕ ಪೂರೈಸಿದರು. ಈ ವೇಳೆ ಅವರು 14 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಆದರೆ, ಶತಕದ ನಂತರ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗದೆ 105 ರನ್ ಗಳಿಸಿ ಔಟಾದರು. 2024 ರಲ್ಲಿ ಇದು ಅವರ ನಾಲ್ಕನೇ ಏಕದಿನ ಶತಕವಾಗಿದೆ.
4 / 6
ಇದರೊಂದಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸ್ಮೃತಿ ಪಾತ್ರರಾಗಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 7 ಆಟಗಾರ್ತಿಯರು ಒಂದು ವರ್ಷದೊಳಗೆ 3 ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಆದರೆ ಮಂಧಾನ 4ರ ಗಡಿ ಮುಟ್ಟಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.
5 / 6
ಈ ಇನ್ನಿಂಗ್ಸ್‌ನೊಂದಿಗೆ ಸ್ಮೃತಿ ಮಂಧಾನ ತಮ್ಮ ಏಕದಿನ ವೃತ್ತಿಜೀವನದಲ್ಲಿ 9 ಶತಕಗಳನ್ನು ಪೂರೈಸಿದ್ದಾರೆ. ಈ ಮೂಲಕ ಭಾರತ ಪರ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಮಹಿಳಾ ಬ್ಯಾಟರ್ ಎಂಬ ದಾಖಲೆಯೂ ನಿರ್ಮಿಸಿದ್ದಾರೆ. ಇದಲ್ಲದೆ, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ಬಂದಿದ್ದಾರೆ.
6 / 6
ಸ್ಮೃತಿ ಮಂಧಾನ ಹೊರತಾಗಿ, ನ್ಯಾಟ್ ಸಿವರ್ ಬ್ರಂಟ್, ಚಾರ್ಲೆಟ್ ಎಡ್ವರ್ಡ್ಸ್ ಮತ್ತು ಚಾಮರಿ ಅಟಪಟ್ಟು ಕೂಡ ಏಕದಿನ ಕ್ರಿಕೆಟ್‌ನಲ್ಲಿ ತಲಾ 9 ಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ಮೆಗ್ ಲ್ಯಾನಿಂಗ್ 15 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.