
ಐಪಿಎಲ್ ದ್ವಿತಿಯಾರ್ಧಕ್ಕಾಗಿ ಆರ್ಸಿಬಿ ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ ಎಲ್ಲಾ ತಂಡಗಳ ಬಹುತೇಕ ಆಟಗಾರರು ಯುಎಇಗೆ ಬಂದಿಳಿದಿದ್ದಾರೆ. ಇದೀಗ ಆರ್ಸಿಬಿ ತಂಡದ ಹೊಸ ಆಟಗಾರರಾದ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಕೂಡ ತಂಡವನ್ನು ಕೂಡಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿ ಮುಗಿಸಿ ಶ್ರೀಲಂಕಾದ ಇಬ್ಬರು ಆಟಗಾರರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಈ ಪ್ರಯಾಣದ ಫೋಟೋವನ್ನು ಹಸರಂಗ ಹಂಚಿಕೊಂಡಿದ್ದು, ಚೊಚ್ಚಲ ಬಾರಿಗೆ ಐಪಿಎಲ್ ಆಡಲು ತೆರಳಿದ್ದೇವೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಆರ್ಸಿಬಿ ಬಳಗದ ಬಹುತೇಕ ಆಟಗಾರರು ಯುಎಇಗೆ ಬಂದಿಳಿದಂತಾಗಿದೆ. ಇನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಟಿಮ್ ಡೇವಿಡ್ ಆಗಮನವಾಗಬೇಕಿದೆ. ಇನ್ನುಳಿದಂತೆ ಎಲ್ಲರೂ ಯುಎಇನಲ್ಲಿದ್ದು, ಸೆಪ್ಟೆಂಬರ್ 20ರ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.

ಆದರೀಗ ಈ ಆಟಗಾರರಿಗೆ ಕೇವಲ 2 ದಿನಗಳ ಕ್ವಾರಂಟೈನ್ ಮಾತ್ರ ಇರಲಿದೆ ಎಂದು ತಿಳಿದು ಬಂದಿದೆ. ಬಯೋ ಬಬಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಆಡಿದ್ದರಿಂದ ಈ ಆಟಗಾರರಿಗೆ ಕ್ವಾರಂಟೈನ್ನಲ್ಲಿ ವಿನಾಯಿತಿ ಸಿಗಲಿದೆ. ಅದರಂತೆ ಎರಡು ದಿನಗಳ ಕಾಲ ಮಾತ್ರ ಕ್ವಾರಂಟೈನ್ ಇರಲಿದ್ದು, ಸೆಪ್ಟೆಂಬರ್ 17 ಅಥವಾ 18 ಕ್ಕೆ ತಂಡವನ್ನು ಕೂಡಿಕೊಳ್ಳಬಹುದು.

ಇದರೊಂದಿಗೆ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಸೆಪ್ಟೆಂಬರ್ 20 ರಂದು ನಡೆಯಲಿರುವ ಕೆಕೆಆರ್ ವಿರುದ್ದದ ಮೊದಲ ಪಂದ್ಯಕ್ಕೆ ಲಭ್ಯರಿರುವುದು ಬಹುತೇಕ ಖಚಿತ. ಇನ್ನು ಬಹುತೇಕ ಆರ್ಸಿಬಿ ಆಟಗಾರರು ಯುಎಇಗೆ ಬಂದಿಳಿದಿದ್ದು, ಅದರಂತೆ ಮೊದಲ ಪಂದ್ಯದ ವೇಳೆ ಎಲ್ಲರೂ ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಲಭ್ಯರಿರಲಿದ್ದಾರೆ.

ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯವನ್ನು ಕೆಕೆಆರ್ ವಿರುದ್ದ ಸೆಪ್ಟೆಂಬರ್ 20 ರಂದು ಆಡಲಿದೆ.