
ಐಪಿಎಲ್ 2022 ರ ಮೆಗಾ ಹರಾಜಿಗಾಗಿ 590 ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕೆಲ ಹಿರಿಯ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಹಿರಿಯರೆನಿಸಿಕೊಂಡರೂ ಆಟದ ವಿಷಯದಲ್ಲೂ ಇವರು ಇನ್ನೂ ತರುಣರು ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿರುವ 5 ಹಿರಿಯ ಆಟಗಾರರು ಯಾರೆಲ್ಲಾ ನೋಡೋಣ...

ಇಮ್ರಾನ್ ತಾಹಿರ್: ವಯಸ್ಸು 43 ಮತ್ತು IPL 2022 ರ ಮೆಗಾ ಹರಾಜಿನಲ್ಲಿ ಭಾಗಿಯಾಗಿರುವ ಅತ್ಯಂತ ಹಿರಿಯ ಆಟಗಾರ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಅವರು ವಿಶ್ವದಾದ್ಯಂತ ಅನೇಕ ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ಲೆಜೆಂಡ್ಸ್ ಲೀಗ್‌ನಲ್ಲಿ 19 ಎಸೆತಗಳಲ್ಲಿ 52 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕೂಡ ಆಡಿದ್ದರು. ತಮ್ಮ ಗೂಗ್ಲಿ ಎಸೆತಗಳ ಮೂಲಕ ಮೈದಾನದಲ್ಲಿ ಸಂಚಲನ ಸೃಷ್ಟಿಸುವ ಇಮ್ರಾನ್ ತಾಹಿರ್ ಈ ಬಾರಿ ಹರಾಜಾಗಲಿದ್ದಾರಾ ಕಾದು ನೋಡಬೇಕಿದೆ.

ಫಿಡೆಲ್ ಎಡ್ವರ್ಡ್ಸ್: 40 ವರ್ಷದ ಈ ಆಟಗಾರ ವೆಸ್ಟ್ ಇಂಡೀಸ್ ಪರ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು 240 ವಿಕೆಟ್‌ಗಳನ್ನು ಪಡೆದಿದ್ದಾರೆ. 2009ರ ಐಪಿಎಲ್‌ನಲ್ಲಿ 6 ಪಂದ್ಯಗಳನ್ನು ಆಡಿರುವ ಫಿಡೆಲ್ 5 ವಿಕೆಟ್ ಪಡೆದಿದ್ದಾರೆ. ಇದೀಗ ಮತ್ತೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಮಿತ್ ಮಿಶ್ರಾ: 39 ವರ್ಷದ ಭಾರತೀಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ 166 ವಿಕೆಟ್‌ಗಳನ್ನು ಪಡೆದಿರುವ ಮಿಶ್ರಾ, ಕಳೆದ ಸೀಸನ್ ಐಪಿಎಲ್‌ನಲ್ಲಿ 4 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು. ಇದಾದ ಬಳಿಕ ಗಾಯದ ಕಾರಣ ಟೂರ್ನಿಯಲ್ಲಿ ಕಾಣಿಸಿಕೊಂಡಿರಲಿಲ್ಲ.

ಎಸ್ ಶ್ರೀಶಾಂತ್: ಕೇರಳ ಎಕ್ಸ್ ಪ್ರೆಸ್ ಎಂದು ಜನಪ್ರಿಯವಾಗಿರುವ 39 ವರ್ಷದ ಎಸ್. ಶ್ರೀಶಾಂತ್ ಮತ್ತೆ ಲೀಗ್‌ಗೆ ಮರಳುತ್ತಿದ್ದಾರೆ. ಇದುವರೆಗೆ 44 ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಶ್ರೀಶಾಂತ್ 40 ವಿಕೆಟ್ ಪಡೆದಿದ್ದಾರೆ. 2013 ರಲ್ಲಿ ಕೊನೆಯ ಪಂದ್ಯವಾಡಿದ್ದ ಶ್ರೀ ಕಳೆದ ಸೀಸನ್ ಹರಾಜಿನಲ್ಲೂ ಕಾಣಿಸಿಕೊಂಡಿದ್ದರು. ಆದರೆ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಈ ಬಾರಿ ಕೂಡ ಹೆಸರು ನೀಡಿದ್ದಾರೆ.

ಡ್ವೇನ್ ಬ್ರಾವೋ: ಈ 38 ವರ್ಷದ ಕೆರಿಬಿಯನ್ ಸೂಪರ್‌ಸ್ಟಾರ್ ಐಪಿಎಲ್ ಸೇರಿದಂತೆ ವಿಶ್ವದಾದ್ಯಂತ ಲೀಗ್‌ಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ 151 ಪಂದ್ಯಗಳನ್ನು ಆಡಿರುವ ಅವರು 1537 ರನ್‌ಗಳ ಜೊತೆಗೆ 167 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಸೀಸನ್ನಲ್ಲಿ ಸಿಎಸ್ಕೆ ಪರ ಆಡಿದ್ದ ಬ್ರಾವೋ 14 ವಿಕೆಟ್ ಪಡೆದಿದ್ದರು.