
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ 10 ತಂಡಗಳು ಸಿದ್ದತೆಗಳನ್ನು ಆರಂಭಿಸಿದೆ. ಈಗಾಗಲೇ ಬಹುತೇಕ ತಂಡಗಳು ಕೋಚ್ ಹಾಗೂ ಸಿಬ್ಬಂದಿಗಳ ಆಯ್ಕೆಗಳನ್ನು ಮಾಡಿದ್ದು, ಇನ್ನು ಕೆಲ ತಂಡಗಳು ಹೊಸ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ.

ಅದರಂತೆ ಸನ್ರೈಸರ್ಸ್ ಹೈದರಾಬಾದ್ ತಂಡವು ಮುಂದಿನ ಸೀಸನ್ನಲ್ಲಿ ತನ್ನ ಮಾಜಿ ಆಟಗಾರನನ್ನೇ ಬೌಲಿಂಗ್ ಆಗಿ ಆಯ್ಕೆ ಮಾಡಲು ಮುಂದಾಗಿದೆ. ಹೌದು, ಎಸ್ಆರ್ಹೆಚ್ ತಂಡದ ಮಾಜಿ ವೇಗಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ 2022 ರಲ್ಲಿ ಸ್ಟೇಯ್ನ್ ಗನ್ ಎಸ್ಆರ್ಹೆಚ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್‌ನಲ್ಲಿ ಎಸ್ಆರ್ಹೆಚ್ ಕೋಚಿಂಗ್ ಸಿಬ್ಬಂದಿಗಳಲ್ಲಿ ಡೇಲ್ ಸ್ಟೇಯ್ನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ ಸ್ಟೇಯ್ನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದಕ್ಕೂ ಮುನ್ನ ಅವರು ಐಪಿಎಲ್‌ನಲ್ಲಿ ಒಟ್ಟು 95 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಡೆಕ್ಕನ್ ಚಾರ್ಜರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು.

ಇನ್ನು ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಟಾಮ್ ಮೂಡಿ ಮತ್ತೆ ನೇತೃತ್ವವಹಿಸುವ ಸಾಧ್ಯತೆಯಿದೆ. ಅವರೊಂದಿಗೆ ಬೌಲಿಂಗ್ ಕೋಚ್ ಆಗಿ ಡೇಲ್ ಸ್ಟೇಯ್ನ್ ಕೈ ಜೋಡಿಸಲಿದ್ದಾರೆ ಎಂದು ಐಪಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ಸ್ಟೇಯ್ನ್ ಮತ್ತೆ ಐಪಿಎಲ್ ಅಂಗಳದಲ್ಲಿ ಹೊಸ ಇನಿಂಗ್ಸ್ ಆರಂಭಿಸುವುದು ಖಚಿತವಾಗಿದೆ.

ದಕ್ಷಿಣ ಆಫ್ರಿಕಾ ಪರ 93 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟೇಯ್ನ್ 439 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ 125 ಏಕದಿನ ಪಂದ್ಯಗಳಿಂದ 196 ವಿಕೆಟ್ಗಳನ್ನು ಪಡೆದಿದ್ದಾರೆ. ಅದೇ ರೀತಿ 47 ಟಿ20 ಪಂದ್ಯಗಳಿಂದ 64 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನ್ನು 95 ಐಪಿಎಲ್ ಪಂದ್ಯಗಳಿಂದ 97 ವಿಕೆಟ್ ಉರುಳಿಸಿದ್ದಾರೆ.

ಇನ್ನು ಆರ್ಸಿಬಿ ಪರ ಒಟ್ಟು 5 ಸೀಸನ್ ಆಡಿರುವ ಡೇಲ್ ಸ್ಟೇಯ್ನ್ 32 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದಾಗ್ಯೂ ಕಳೆದ ಸೀಸನ್ ಹರಾಜಿಗೂ ಮುನ್ನವೇ ಐಪಿಎಲ್ನಿಂದ ಹೊರಗುಳಿಯುವುದಾಗಿ ಸ್ಟೇಯ್ನ್ ತಿಳಿಸಿದ್ದರು. ಇದೀಗ ಒಂದು ವರ್ಷದ ಬಳಿಕ ಮತ್ತೆ ಐಪಿಎಲ್‌ನಲ್ಲಿ ಬೌಲಿಂಗ್ ಕೋಚ್ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ಎಸ್ಆರ್ಹೆಚ್ ತಂಡವು ಸಿಬ್ಬಂದಿ ವರ್ಗಗಳ ನೇಮಕಕ್ಕೆ ಮುಂದಾಗಿದ್ದು, ಅದರಂತೆ ಡೇಲ್ ಸ್ಟೇಯ್ನ್ ಮುಂದಿನ ಸೀಸನ್ನಲ್ಲಿ ಬೌಲಿಂಗ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್ನ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಮತ್ತು ಬ್ಯಾಟಿಂಗ್ ಕೋಚ್ ಬ್ರಾಡ್ ಹ್ಯಾಡಿನ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ತಂಡಕ್ಕೆ ಪ್ರಸ್ತುತ ಹೊಸ ಕೋಚಿಂಗ್ ಸಿಬ್ಬಂದಿಯ ಅವಶ್ಯಕತೆಯಿದೆ. ಅಲ್ಲದೆ ವಿ.ವಿ.ಎಸ್. ಲಕ್ಷ್ಮಣ್ ಕೂಡ ತಂಡದಲ್ಲಿ ಇರುವುದಿಲ್ಲ. ಲಕ್ಷ್ಮಣ್ ಎಸ್ಆರ್ಹೆಚ್ ತಂಡದ ಮಾರ್ಗದರ್ಶಕರಾಗಿದ್ದರು. ಆದರೆ ಈಗ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕವಾಗಿದ್ದು, ಹೀಗಾಗಿ ಅವರು ಐಪಿಎಲ್ ಸಿಬ್ಬಂದಿ ವರ್ಗದಲ್ಲಿ ಕಾಣಿಸಿಕೊಳ್ಳುವಂತಿಲ್ಲ.