
ಇಂಡಿಯನ್ ಪ್ರೀಮಿಯರ್ ಲೀಸ್ ಸೀಸನ್ 15 ಗಾಗಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಕೇವಲ 27 ಆಟಗಾರರನ್ನು ಉಳಿಸಿಕೊಂಡರು, ಉಳಿದ ಆಟಗಾರರನ್ನು ಬಿಡುಗಡೆ ಮಾಡಿದೆ. ಇನ್ನು ಹೊಸ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಇದಾದ ಬಳಿಕ ಮೆಗಾ ಹರಾಜು ನಡೆಯಲಿದೆ.

ಈ ಬಾರಿ ಮೆಗಾ ಹರಾಜಿನಲ್ಲಿ ಬಹುತೇಕ ಸ್ಟಾರ್ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅದರಲ್ಲೂ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಕೂಡ ಈ ಬಾರಿ ಹರಾಜಿನಲ್ಲಿದ್ದಾರೆ. ಅತ್ತ ಪಂಜಾಬ್ ಫ್ರಾಂಚೈಸಿ ಉಳಿಸಿಕೊಳ್ಳಲು ಬಯಸಿದರೂ ರಾಹುಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲು ಇಚ್ಛಿಸಿದ್ದಾರೆ.

ಕಳೆದ ಮೂರು ಸೀಸನ್ನಲ್ಲಿ ಪಂಜಾಬ್ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಅವರ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಲಿರುವುದು ಸ್ಪಷ್ಟ. ಆದರೆ ತಂಡದಿಂದ ಹೊರನಡೆದಿರುವ ಕೆಎಲ್ ರಾಹುಲ್ ಅವರನ್ನು ಮರಳಿ ತಂಡಕ್ಕೆ ಕರೆತರುವ ಇರಾದೆಯಲ್ಲಿದೆ ಪಂಜಾಬ್ ಕಿಂಗ್ಸ್.

ಹೌದು, ಕೆಎಲ್ ರಾಹುಲ್ ಅವರನ್ನು ಮತ್ತೆ ತಂಡಕ್ಕೆ ಕರೆತರಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಚರ್ಚೆಗಳು ಆರಂಭಿಸಿದೆ. ಪಂಜಾಬ್ ಕಿಂಗ್ಸ್ ಟೀಮ್ ಮ್ಯಾನೇಜ್ಮೆಂಟ್ ಹೊಸ ಒಪ್ಪಂದದ ಕುರಿತು ರಾಹುಲ್ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಪಂಜಾಬ್ ತಂಡವು ರಾಹುಲ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಲು ಉತ್ಸುಕವಾಗಿದ್ದು, ಹೀಗಾಗಿ ರಾಹುಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ದೊಡ್ಡ ಮೊತ್ತ ನೀಡಿ ಮತ್ತೆ ಖರೀದಿಸುವ ಪ್ಲ್ಯಾನ್ ರೂಪಿಸಿದೆ.

ಆದರೆ ಅತ್ತ ಎರಡು ಹೊಸ ಫ್ರಾಂಚೈಸಿಗಳಿಗೆ ಮೆಗಾ ಹರಾಜಿಗೂ ಮುನ್ನವೇ ತಲಾ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು. ಅದರಂತೆ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಕೂಡ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಹೊಸ ತಂಡಗಳ ಜೊತೆ ಒಪ್ಪಂದ ಮಾಡಿಕೊಳ್ಳದಂತೆ, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರ ಮನವೊಲಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟರೂ, ಪಂಜಾಬ್ ತಂಡವು ಕೆಎಲ್ ರಾಹುಲ್ ಅವರನ್ನು ಬಿಡಲು ಸಿದ್ಧರಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಕೆಎಲ್ಆರ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ 10 ತಂಡಗಳ ನಡುವೆ ಖರೀದಿಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಕೆಎಲ್ ರಾಹುಲ್