
ಎಲ್ಲಾ ಫ್ರಾಂಚೈಸಿಗಳು ಐಪಿಎಲ್ 2022 ರ ಮೆಗಾ ಹರಾಜಿಗಾಗಿ ಸಿದ್ದತೆಗಳನ್ನು ಆರಂಭಿಸಿದೆ. ಈ ವಿಷಯದಲ್ಲಿ ಪಂಜಾಬ್ ಕಿಂಗ್ಸ್ ಕೂಡ ಹಿಂದೆ ಬಿದ್ದಿಲ್ಲ. ಈ ಬಾರಿ ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಪಂಜಾಬ್ ಬಹುತೇಕ ಹೊಸ ಆಟಗಾರರನ್ನು ಖರೀದಿಸುವ ಇರಾದೆಯಲ್ಲಿದೆ. ಅದರಂತೆ ಇದೀಗ ತಮಿಳುನಾಡು ವೇಗಿಯನ್ನು ಟ್ರಯಲ್ಸ್ಗೆ ಕರೆದಿದೆ.

27 ವರ್ಷದ ತಮಿಳುನಾಡಿನ ವೇಗಿ ಗಣೇಶನ್ ಪೆರಿಯಸಾಮಿ ಪಂಜಾಬ್ ಕಿಂಗ್ಸ್ ಟ್ರಯಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹಾಗೂ ಇತರರ ಮುಂದಿ ಪೆರಿಯಸಾಮಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಮೆಗಾ ಹರಾಜಿನಲ್ಲಿ ಗಣೇಶನ್ ಪೆರಿಯಸಾಮಿ ಅವರ ಖರೀದಿಗೆ ಪಂಜಾಬ್ ಕಿಂಗ್ಸ್ ಬಿಡ್ ಮಾಡುವ ಸಾಧ್ಯತೆಯಿದೆ.

ಪೆರಿಯಸಾಮಿ ಈ ಹಿಂದೆ ಕೂಡ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ 2020 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅಕಾಡೆಮಿಯ ತಂಡದ ನೆಟ್ ಬೌಲರ್ ಆಗಿ ತೊಡಗಿಸಿಕೊಂಡಿದ್ದರು. ಇದೀಗ ಪಂಜಾಬ್ ಕಿಂಗ್ಸ್ ಪೆರಿಯಸಾಮಿಯನ್ನು ಖರೀದಿಸುವ ಬಗ್ಗೆ ಆಸಕ್ತಿ ತೋರಿಸಿದ್ದು, ಅದಕ್ಕೂ ಮುನ್ನ ಟ್ರಯಲ್ಸ್ ನಡೆಸಲಾಗಿದೆ.

ತಮಿಳುನಾಡು ಪರ 9 ಟಿ20 ಪಂದ್ಯಗಳನ್ನು ಆಡಿರುವ ಪೆರಿಯಸಾಮಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಅವರು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವ ಬೌಲಿಂಗ್ ಆ್ಯಕ್ಷನ್ನಿಂದ ಎಂಬುದು ವಿಶೇಷ. ಹೌದು, ಪೆರಿಯಸಾಮಿ ಅವರ ಬೌಲಿಂಗ್ ಶೈಲಿ ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗ ಅವರನ್ನು ಹೋಲುತ್ತದೆ. ಅಷ್ಟೇ ಅಲ್ಲದೆ ಪೆರಿಯಸಾಮಿ ಕೂಡ ಯಾರ್ಕರ್ ಎಸೆತಗಳಿಗೆ ಎತ್ತಿದ ಕೈ ಎಂಬುದು ವಿಶೇಷ.

ಅಂದಹಾಗೆ ಪೆರಿಯಸಾಮಿ ಮತ್ತು ಟೀಮ್ ಇಂಡಿಯಾ ವೇಗಿ ಟಿ. ನಟರಾಜನ್ ತಮಿಳುನಾಡಿನ ಚಿನ್ನಪ್ಪಂಪಟ್ಟಿ ಗ್ರಾಮದ ನಿವಾಸಿಗಳು ಎಂಬುದು ಮತ್ತೊಂದು ವಿಶೇಷ. ಇಬ್ಬರೂ ಕಡುಬಡತನದಿಂದಲೇ ಐಪಿಎಲ್ ತನಕ ಬೆಳೆದು ನಿಂತಿದ್ದಾರೆ. ಆದರೆ ಪೆರಿಯಸಾಮಿ ದೈಹಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆಯುತ್ತಿರುವುದು ವಿಶೇಷ.

ಏಕೆಂದರೆ ಗಣೇಶನ್ ಪೆರಿಯಸಾಮಿ ತಮ್ಮ 7 ನೇ ವಯಸ್ಸಿನಲ್ಲಿ ಸಿಡುಬು ರೋಗದಿಂದಾಗಿ ಅವರು ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡರು. ಇದಾಗ್ಯೂ ಅವರು ಬಾಲ್ಯದಿಂದಲೂ ಕ್ರಿಕೆಟ್ ಅನ್ನು ತನ್ನ ನೆಚ್ಚಿನ ಕ್ರೀಡೆಯಾಗಿ ಆಯ್ಕೆ ಮಾಡಿಕೊಂಡಿದ್ದರು. ಒಂದೇ ಕಣ್ಣಿನ ದೃಷ್ಟಿಯನ್ನು ತನ್ನ ಸಾಮರ್ಥ್ಯವಾಗಿ ಬಳಸಿಕೊಂಡ ಪೆರಿಯಸಾಮಿ ಗುರಿ ಇಡುವುದನ್ನು ಕರಗತ ಮಾಡಿಕೊಂಡರು.

ಅದರಂತೆ 2019 ರ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಅಪಾಯಕಾರಿ ಬೌಲರ್ ಎನಿಸಿಕೊಂಡಿದ್ದರು. ಏಕೆಂದರೆ ಆ ಸೀಸನ್ನಲ್ಲಿ ಪೆರಿಯಸಾಮಿ ಉರುಳಿಸಿದ್ದು ಬರೋಬ್ಬರಿ 21 ವಿಕೆಟ್‌ಗಳನ್ನು ಎಂಬುದು ವಿಶೇಷ. ಇದೀಗ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಚೊಚ್ಚಲ ಐಪಿಎಲ್ ಅವಕಾಶ ಗಣೇಶನ್ ಪೆರಿಯಸಾಮಿ ಎದುರು ನೋಡುತ್ತಿದ್ದಾರೆ.

ಗಣೇಶನ್ ಪೆರಿಯಸಾಮಿ