Updated on: Apr 02, 2022 | 2:54 PM
ಉಮೇಶ್ ಯಾದವ್....ಕಳೆದ ಸೀಸನ್ ಐಪಿಎಲ್ನಲ್ಲಿ ಈ ಹೆಸರು ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡೇ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಉಮೇಶ್ ಯಾದವ್ಗೆ ಕೇವಲ 3 ಪಂದ್ಯಗಳಲ್ಲಿ ಆಡುವ ಅವಕಾಶ ಮಾತ್ರ ಸಿಕ್ಕಿತ್ತು. ಅಂದರೆ ಬಹುತೇಕ ಮ್ಯಾಚ್ಗಳಲ್ಲಿ ಬೆಂಚ್ ಕಾದಿದ್ದೇ ಬಂತು.
ಹೀಗಾಗಿಯೇ ಉಮೇಶ್ ಯಾದವ್ ಐಪಿಎಲ್ ಕೆರಿಯರ್ ಖತಂ ಎಂದವರೇ ಹೆಚ್ಚು. ಆದರೆ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಅಂತಿಮ ಹಂತದಲ್ಲಿ ಉಮೇಶ್ ಯಾದವ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತು. ಕೆಕೆಆರ್ ತಂಡದ ಆ ಅಂತಿಮ ನಿರ್ಧಾರ ಇದೀಗ ಫಲ ನೀಡಿದೆ. ಕೆಕೆಆರ್ ಪರ ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವ ಉಮೇಶ್ ಯಾದವ್ ಭರ್ಜರಿ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲೂ ಆಡಿರುವ ಮೂರು ಪಂದ್ಯಗಳಲ್ಲೂ ಮೊದಲ ಓವರ್ನಲ್ಲೇ ವಿಕೆಟ್ ಉರುಳಿಸಿ ಕೆಕೆಆರ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲೂ ಉಮೇಶ್ ಯಾದವ್ ಮೊದಲ ಓವರ್ನಲ್ಲೇ ಮಯಾಂಕ್ ಅಗರ್ವಾಲ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೆ ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ನೊಂದಿಗೆ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ನಾಲ್ಕು ವಿಕೆಟ್ನೊಂದಿಗೆ ಉಮೇಶ್ ಯಾದವ್ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ಐಪಿಎಲ್ನಲ್ಲೇ ಒಂದೇ ತಂಡದ ವಿರುದ್ದ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಇದೀಗ ಉಮೇಶ್ ಯಾದವ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು. ಮಾಲಿಂಗ ಸಿಎಸ್ಕೆ ವಿರುದ್ದ 31 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಉಮೇಶ್ ಯಾದವ್ ಪಂಜಾಬ್ ಕಿಂಗ್ಸ್ ವಿರುದ್ದ ಒಟ್ಟು 33 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಲಸಿತ್ ಮಾಲಿಂಗ ದಾಖಲೆಯನ್ನು ಮುರಿದು ಐಪಿಎಲ್ನಲ್ಲಿ ಒಂದೇ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೊಸ ಇತಿಹಾಸ ಬರೆದಿದ್ದಾರೆ.
ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಇದುವರೆಗೆ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಗೆಲುವಿನ ರೂವಾರಿ ಎನಿಸಿಕೊಂಡು ಅತ್ಯಧಿಕ ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ವೇಗದ ಬೌಲರ್ ಎಂಬ ದಾಖಲೆಯನ್ನು ಸಹ ಉಮೇಶ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಐಪಿಎಲ್ ಸೀಸನ್ 15 ಮೂಲಕ ಉಮೇಶ್ ಯಾದವ್ ಸಂಚಲನ ಸೃಷ್ಟಿಸಿದ್ದು, ಸದ್ಯ 8 ವಿಕೆಟ್ ಪಡೆದಿರುವ ವೇಗಿ ಈ ಬಾರಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಳ್ಳುವ ತವಕದಲ್ಲಿದ್ದಾರೆ.