
ಈ ಬಾರಿಯ ಐಪಿಎಲ್ ಹರಾಜಿನಲ್ಲಿ 590 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಅದರಂತೆ ಈ ಆಟಗಾರರಿಂದ ತಮಗೆ ಬೇಕಾದ ಪ್ಲೇಯರ್ಸ್ಗಾಗಿ 10 ತಂಡಗಳು ಬಿಡ್ಡಿಂಗ್ ನಡೆಸಲಿದೆ. ಈ ಪಟ್ಟಿಯಲ್ಲಿ ಶಿಖರ್ ಧವನ್, ಆರ್ ಅಶ್ವಿನ್, ಡೇವಿಡ್ ವಾರ್ನರ್, ಟ್ರೆಂಟ್ ಬೌಲ್ಟ್, ಮೊಹಮ್ಮದ್ ಶಮಿಯಂತಹ ಸ್ಟಾರ್ ಆಟಗಾರರ ದಂಡೇ ಇದೆ.

ಇವೆಲ್ಲದರ ನಡುವೆ ಇದೀಗ ಎಲ್ಲರ ಗಮನ ಸೆಳೆದಿರುವುದು ಈ ಪಟ್ಟಿಯಲ್ಲಿರುವ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರ ಹೆಸರು. ಹೌದು, ಭಾರತ ಪರ ಆಡಿರುವ ಮನೋಜ್ ತಿವಾರಿ ಕೂಡ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೀಡಿದ್ದಾರೆ. ತಮ್ಮ ಮೂಲ ಬೆಲೆಯನ್ನು ಮನೋಜ್ ತಿವಾರಿ 50 ಲಕ್ಷ ರೂ. ಎಂದು ಘೋಷಿಸಿದ್ದಾರೆ.

ಈ ಹಿಂದೆ ಕೆಕೆಆರ್, ರೈಸಿಂಗ್ ಪುಣೆ ಜೈಂಟ್ಸ್ ತಂಡದ ಪರ ಆಡಿದ್ದ ಮನೋಜ್ ತಿವಾರಿ 2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮನೋಜ್ ತಿವಾರಿಯನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಕಳೆದ ಸೀಸನ್ನಲ್ಲೂ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ತಿವಾರಿ ಅನ್ಸೋಲ್ಡ್ ಆಗಿದ್ದರು.

ಈ ವರ್ಷದ ರಣಜಿ ಟ್ರೋಫಿ ಬೆಂಗಾಲ್ ಪ್ರಕಟಿಸಿದ ತಂಡದಲ್ಲಿ ಮನೋಜ್ ತಿವಾರಿ ಕೂಡ ಇದ್ದರು. ಮನೋಜ್ ತಿವಾರಿ 2020 ರಲ್ಲಿ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ ಬಂಗಾಳದ ಪರವಾಗಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಈ ಬಾರಿಯೂ ಅವರು ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದ ಇದೀಗ ಟೂರ್ನಿಯನ್ನು ಮುಂದೂಡಲಾಗಿದೆ.

ಮನೋಜ್ ತಿವಾರಿ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದು, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಬ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ನಂತರ ಅವರನ್ನು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು. ಅದರಂತೆ ಇದೀಗ ಮನೋಜ್ ತಿವಾರಿ ಕ್ರೀಡಾ ಸಚಿವರಾಗಿ ಜೊತೆಗೆ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಐಪಿಎಲ್ ಮೆಗಾ ಹರಾಜಿನಲ್ಲೂ ಮನೋಜ್ ತಿವಾರಿ ಹೆಸರು ನೀಡಿದ್ದು, ಈ ಬಾರಿ ಬಿಕರಿಯಾಗಲಿದ್ದಾರಾ ಕಾದು ನೋಡಬೇಕಿದೆ.